ದೇವರಹಳ್ಳಿಯ ರೈತರ ಜಮೀನಿಗೆ ಭೇಟಿ ನೀಡಿದ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಕೆ.ಎಂ.ಉದಯ್ ಕಬ್ಬಿನ ಬೆಳೆಗಳು ಒಣಗಿರುವುದನ್ನು ವೀಕ್ಷಿಸಿದರು. ಡಾ.ಕುಮಾರ, ಕೆ.ಆರ್.ನಂದಿನಿ, ಡಾ.ಶೋಭಾರಾಣಿ ಇತರರಿದ್ದರು.  
ಮಂಡ್ಯ

ಬರ ಪರಿಹಾರಕ್ಕೆ ತ್ವರಿತ ಕ್ರಮ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ

ಕೆ.ಎಂ ದೊಡ್ಡಿ:

ಮುಂಗಾರು ಮಳೆ ವೈಫಲ್ಯದಿಂದಾಗಿ ಬೆಳೆಗಳು ಒಣಗಿರುವ ಕುರಿತಂತೆ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಕೆ.ಎಂ.ಉದಯ್ ಅವರು ದೇವರಹಳ್ಳಿಯ ರೈತರ ಜಮೀನಿಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿ, ರೈತರ ಕಷ್ಟವನ್ನು ಆಲಿಸಿದರು.

ಗ್ರಾಮದ ಜಯಮ್ಮ ಬಸವೇಗೌಡ ಹಾಗೂ ನಗರಕೆರೆ ದುಂಡಮ್ಮ ಅವರ ಜಮೀನಲ್ಲಿ ಕಬ್ಬಿನ ಬೆಲೆ ನೀರಿಲ್ಲದೆ ಸಂಪೂರ್ಣವಾಗಿ ಒಣಗಿ ಹಾನಿಯಾಗಿದ್ದನ್ನು ಅಧಿಕಾರಿಗಳ ಜತೆಗೂಡಿ ವೀಕ್ಷಿಸಿದ ಸಚಿವರು, ಮಳೆ ಕೊರತೆಯಿಂದ ರೈತರು ಲಕ್ಷಾಂತರ ರೂ., ಖರ್ಚು ಮಾಡಿ ಬೆಳೆದ ಬೆಳೆಗಳು ಕೈಗೆ ಸಿಗದೆ ಕಣ್ಣೀರು ಹಾಕುವಂತಾಗಿದೆ. ಸರ್ಕಾರದ ವತಿಯಿಂದ ಬರ ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಾಗುತ್ತಿದೆ. ಯಾವುದೇ ರೈತರು ಆತಂಕ ಪಡಬಾರದು ಎಂದು ತಿಳಿಸಿದರು.
ನೀರಿಲ್ಲದೆ ಕಟಾವಿಗೆ ಬಂದಿರುವ ಕಬ್ಬಿನ ಬೆಳೆ ಸಂಪೂರ್ಣ ಒಣಗಿದ್ದು, ಸಚಿವರು ಗಂಭೀರವಾಗಿ ಪರಿಗಣಿಸಿ ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಪರಿಹಾರಕ್ಕೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದರು.
ಕಟಾವಿಗೆ ಸಿದ್ಧವಾಗಿರುವ ಕಬ್ಬನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣ ಕಟಾವು ಮಾಡಿಸಿ ಹತ್ತಿರದ ಸಕ್ಕರೆ ಕಾರ್ಖಾನೆಗಳಿಗೆ ಕಳುಹಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಮಾತನಾಡಿ ಕಬ್ಬು ನುರಿಸುವಿಕೆ ತ್ವರಿತಗೊಳಿಸಲು ಸೂಚಿಸಿದರು.
ಕಾರ್ಖಾನೆಗಳು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕಬ್ಬನ್ನು ಕೊಂಡುಕೊಳ್ಳುವುದನ್ನು ತಕ್ಷಣ ನಿಲ್ಲಿಸಿ ಸ್ಥಳೀಯ ರೈತರು ಬೆಳೆದಿರುವ ಕಬ್ಬನ್ನು ತೆಗದುಕೊಳ್ಳುವಂತೆ ಕೂಡಲೇ ಸಭೆ ನಡೆಸಿ ತಿಳಿಸಬೇಕು ಎಂದು ಹೇಳಿದರು.
ನಂತರ ಶಾಸಕ ಕೆ.ಎಂ ಉದಯ್ ಮಾತನಾಡಿ, ಬರಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಮದ್ದೂರು ತಾಲೂಕಿನಾದ್ಯಂತ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ನಿಖರವಾದ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಬರ ಪರಿಸ್ಥಿತಿ ಸಮಯದಲ್ಲಿ ಸರ್ಕಾರ ರೈತರ ಬೆನ್ನಿಗೆ ನಿಲ್ಲಲಿದೆ. ಪರಿಹಾರ ಧನವನ್ನು ಶೀಘ್ರದಲ್ಲೇ ನೇರ ನಗದು ವರ್ಗಾವಣೆ ಮೂಲಕ ರೈತರಿಗೆ ಒದಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸಿಲ್ದಾರ್ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ನೂರಾರು ರೈತರು ಉಪಸ್ಥಿತರಿದ್ದರು.