ಕಾರ್ಯಕ್ರಮದಲ್ಲಿ ಮೈಸೂರು ಪ್ರಾದೇಶಿಕ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಮುಖೇಶ್ ಮಾತನಾಡಿದರು. ದೇಶಹಳ್ಳಿ ಮೋಹನ್‌ಕುಮಾರ್, ಹಾಲಪ್ಪ, ಗೋವಿಂದ, ಕುಮಾರ್‌ಕೊಪ್ಪ, ಇಂದ್ರಮ್ಮ ಇದ್ದರು. 
ಮಂಡ್ಯ

ತಂಬಾಕು ಸೇವನೆಯಿಂದ ಅನಾರೋಗ್ಯ

ಪ್ರಮುಖ ಮುಖ್ಯಾಂಶಗಳು

  • ದೇಶಹಳ್ಳಿ ಮೋಹನ್‌ಕುಮಾರ್ ಕಳವಳ
  • ತಂಬಾಕು ವಿರೋಧಿ ದಿನಾಚರಣೆ
ಮದ್ದೂರು: ತಂಬಾಕು ಸೇವನೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಸಂಭವಿಸುತ್ತದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇಶಹಳ್ಳಿ ಮೋಹನ್‌ಕುಮಾರ್ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಮದ್ದೂರು ತಾಲೂಕು ಘಟಕದಿಂದ ಆಯೋಜಿಸಿದ್ದ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ತಂಬಾಕು ಸೇವನೆಯಿಂದ ಹಲವು ರೋಗಗಳು ಬಂದು ಮನುಷ್ಯನ ಬದುಕು ನರಕಸದೃಶ್ಯವಾಗುತ್ತದೆ. ಜತೆಗೆ ಕುಟುಂಬಗಳು ಸಂಕಷ್ಟ ಎದುರಿಸಬೇಕಾಗುತ್ತದೆ. ವ್ಯಸನಿಗಳು ತಂಬಾಕು ಸೇವನೆ ಬಿಟ್ಟು ನೆಮ್ಮದಿ ಜೀವನ ನಡೆಸಬೇಕು ಎಂದು ಮನವಿ ಮಾಡಿದರು.
ಮೈಸೂರು ಪ್ರಾದೇಶಿಕ ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳು ಮುಖೇಶ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು, ಮದ್ಯವರ್ಜನ ಶಿಬಿರ, ನಮ್ಮೂರು ನಮ್ಮ ಕೆರೆ, ವಾಸ್ತಲ್ಯ ಕಾರ್ಯಕ್ರಮ, ನಿರ್ಗತಿಕರ ಮಾಶಾಸನ, ಸುಜ್ಞಾನ ನಿಧಿ ಶಿಷ್ಯವೇತನ, ರುದ್ರಭೂಮಿ ಅಭಿವೃದ್ಧಿ, ಜ್ಞಾನ ವಿಕಾಸ ಕಾರ್ಯಕ್ರಮಗಳಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ತಂದು ಜನರಿಗೆ ಅನುಕೂಲ ಕಲ್ಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಕುಮಾರ್ ಕೊಪ್ಪ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅನೇಕ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ದುಶ್ಚಟಗಳ ನಿರ್ಮೂಲನೆಗೂ ಅಗತ್ಯ ಕಾರ್ಯಕ್ರಮ ನಡೆಸುತ್ತಿದೆ ಎಂದು ಹೇಳಿದರು.
ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಅನುಷ್ಠಾನ ಕುರಿತು ಹಾಗೂ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಆರಕ್ಷಕ ನಿರೀಕ್ಷಕ ಪ್ರಕಾಶ್ ಮಾತನಾಡಿ, ಹದಿಹರಿಯದ ವಯಸ್ಸಿನಲ್ಲಿ ಮಕ್ಕಳು ದಾರಿ ತಪ್ಪುತ್ತಿರುವ ಕುರಿತು ತಾಯಂದಿರು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ವ್ಯಕ್ತಿ ಗೋವಿಂದ ಮಾತನಾಡಿದರು. ಒಕ್ಕೂಟ ಅಧ್ಯಕ್ಷೆಯರಾದ ಇಂದ್ರಮ್ಮ, ದೇವಸುಜಯ, ತಾಲೂಕು ಯೋಜನಾಧಿಕಾರಿ ಹಾಲಪ್ಪ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶಿಲ್ಪಾ, ಮೇಲ್ವಿಚಾರಕಿ ಪ್ರತಿಭಾ, ಸೇವಾ ಪ್ರತಿನಿಧಿ ಲಕ್ಷ್ಮೀ, ಪದಾಧಿಕಾರಿಗಳು ಸಂಘದ ಸದಸ್ಯರು ಇದ್ದರು.