ನಾಗಮಂಗಲ ಪಟ್ಟಣದ ತಾಲೂಕು ಆಡಳಿತಸೌಧದ ಮುಂಭಾಗ ತಹಸೀಲ್ದಾರ್ ಆದರ್ಶ ಅವರು ಮಗುವಿಗೆ ಪೋಲಿಯೋ ಲಸಿಕೆ ಹಾಕಿ ಅಭಿಯಾನಕ್ಕೆ ಚಾಲನೆ ನೀಡಿದರು. ಕೃಷ್ಣಮೂರ್ತಿ ಕಿತರರು ಇದ್ದರು.
ನಾಗಮಂಗಲ: ಪೋಲಿಯೋ ಒಂದು ವೈರಸ್‌ನಿಂದ ಉಂಟಾಗುವ ಸೋಂಕು. ಇದು ಮಕ್ಕಳಲ್ಲಿ ಸ್ಥಿರ ಅಂಗವಿಕಲತೆಗೆ ಕಾರಣವಾಗಬಲ್ಲದು. ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪೋಲಿಯೋ ಲಸಿಕೆ ಹಾಕಿಸುವ ಬಗ್ಗೆ ಪಾಲಕರು ನಿರ್ಲಕ್ಷ್ಯ ಮನೋಭಾವ ತೋರಬಾರದು ಎಂದು ತಹಸೀಲ್ದಾರ್ ಆದರ್ಶ ಎಚ್ಚರಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗ ಭಾನುವಾರ ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಸಹಯೋಗದೊಂದಿಗೆ ಆಯೋಜಿಸಿದ್ದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನದಲ್ಲಿ ಮಗುವಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಲ್ಸ್ ಪೋಲಿಯೋ ಭಾರತದಲ್ಲಿ ಪೋಲಿಯೋ ನಿರ್ಮೂಲನೆಗಾಗಿ ಸರ್ಕಾರ ನಡೆಸುವ ರಾಷ್ಟ್ರೀಯ ಲಸಿಕಾ ಅಭಿಯಾನ. ಇದು 5 ವರ್ಷಳಗಿನ ಮಕ್ಕಳಿಗೆ ಲಸಿಕೆಯನ್ನು ನೀಡುವ ಮೂಲಕ ಪೋಲಿಯೋ ವೈರಸ್ ಸೋಂಕನ್ನು ತಡೆಯುತ್ತದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ನಾರಾಯಣ್ ಮಾತನಾಡಿ, ಒಟ್ಟು 71 ಬೂತ್ ಗಳು ಕಾರ್ಯ ನಿರ್ವಹಿಸುತ್ತಿದ್ದು, 12, 577 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ. ಲಸಿಕೆ ನೀಡಿದ ದಿನ ಸೇರಿದಂತೆ ಎರಡನೇ ದಿನ ಮತ್ತು ಮೂರನೇ ದಿನ ಗ್ರಾಮೀಣ ಮನೆಗಳಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು. ನಾಗಮಂಗಲ ಪಟ್ಟಣದಲ್ಲಿ ಮನೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಎರಡನೇ, ಮೂರನೇ ಮತ್ತು ನಾಲ್ಕನೇ ದಿನ ನಗರಗಳ ಮನೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಒಟ್ಟು 284 ಸಿಬ್ಬಂದಿ ಸೇರಿದಂತೆ 15 ಮಂದಿ ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಿಡಿಪಿಓ ಕೃಷ್ಣಮೂರ್ತಿ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಇದ್ದರು.