ಕಿಕ್ಕೇರಿ ಹೋಬಳಿಯ ತೆಂಗಿನಘಟ್ಟ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಅಭಿವೃದ್ಧಿಗೆ ಯೋಗೇಶ್ ಭೂಮಿಪೂಜೆ ನೆರವೇರಿಸಿದರು. ಪ್ರಸಾದ್, ಮಹದೇಶ, ದೇವರಾಜು, ಕುಮಾರ್, ಯಶೋದಾ, ವಿಜಯಾ, ಮಂಗಳ ಇತರರು ಇದ್ದರು.
- ಪ್ರಾದೇಶಿಕ ನಿರ್ದೇಶಕ ಯೋಗೇಶ್ ಅಭಿಮತ
- ತೆಂಗಿನಘಟ್ಟದಲ್ಲಿ ಪ್ರಗತಿಗೆ ಭೂಮಿಪೂಜೆ
ಕಿಕ್ಕೇರಿ: ಕೆರೆಗಳು ಉಳಿದರೆ ನಾವು, ನೀವು, ಎಲ್ಲವೂ ಎಂಬ ಸಂಕಲ್ಪದಲ್ಲಿ ನಮ್ಮ ಸಂಸ್ಥೆ ಸದಾ ಮುಂದಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಯೋಗೇಶ್ ಹೇಳಿದರು.
ಹೋಬಳಿಯ ತೆಂಗಿನಘಟ್ಟ ಗ್ರಾಮದಲ್ಲಿ ಕೆರೆ ಅಭಿವೃದ್ಧಿಗೆ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಹೇಮಾವತಿ ಅಮ್ಮನವರ ಆಶಯದಂತೆ ರಾಜ್ಯಾದ್ಯಂತ ಕೆರೆ ಉಳಿಸುವ ಅಭಿಯಾನ ಮಾಡಲಾಗುತ್ತಿದೆ. ಊರಿಗೊಂದು ದೇಗುಲ ಮುಖ್ಯವಾದಂತೆ ಕೆರೆಗಳು ಮುಖ್ಯವಾಗಿದೆ. ಕೆರೆ ಅಭಿವೃದ್ಧಿ ಮಾಡಿದರೆ ಕನಿಷ್ಠ 5 ವರ್ಷದವರೆಗೆ ಕೆರೆಯಲ್ಲಿರುವ ಮಣ್ಣನ್ನು ಹೂಳಿನ ನೆಪದಲ್ಲಿ ತೆಗೆಯಬಾರದು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿನ ಕೆರೆಗಳನ್ನು ಪುನರುಜ್ಜೀವನಗೊಳಿಸುವುದು, ಕೆರೆಯಲ್ಲಿ ಮಳೆನೀರು ಸಂಗ್ರಹ ಹೆಚ್ಚಿಸಿ ಅಂರ್ತಜಲ ವೃದ್ಧಿಸುವುದು, ಕೆರೆ ದಂಡೆಗಳನ್ನು ಬಲಪಡಿಸಿ ಕೆರೆಯಲ್ಲಿ ನೀರಿನ ಸೋರುವಿಕೆ ತಡೆಗಟ್ಟುವುದು. ಹೂಳು ತೆಗೆದು ವರ್ಷಪೂರ್ತಿ ನೀರು ಇರುವಂತೆ, ರೈತ, ಜಲಚರ, ಪ್ರಾಣಿಪಕ್ಷಿಗಳು ಬದುಕಲು ಆಸರೆಯಾಗಲು ಯೋಜನೆ ಸದಾ ಬದ್ಧವಿದೆ ಎಂದು ಮಾಹಿತಿ ನೀಡಿದರು.
ಕೆರೆಯಲ್ಲಿ ನೀರಿದ್ದರೆ ಅದು ಅಭಿವೃದ್ಧಿ ಸಂಕೇತ. ಸಮಗ್ರ ಬಲವರ್ಧನೆಗೆ ಸಹಕಾರಿ. ಕೆರೆಕಟ್ಟೆಯಲ್ಲಿ ನೀರಿದ್ದರೆ ಜಲಚರ, ಪ್ರಾಣಿಪಕ್ಷಿಗಳ ಬದುಕು. ಅಂತರ್ಜಲ ವೃದ್ಧಿಸಿ ರೈತ ಹಸನ್ಮುಖಿಯಾಗಿರಲು ಸಾಧ್ಯ. ಕೆರೆಗಳು ಒತ್ತುವರಿಯಾಗದಂತೆ ನೋಡಿಕೊಳ್ಳಿ. ತ್ಯಾಜ್ಯದಿಂದ ಮಲಿನವಾಗದಂತೆ ಎಚ್ಚರಿಕೆ ವಹಿಸಿ. ನಿಮ್ಮೂರ ಕೆರೆ ನಿಮ್ಮ ವೈಯಕ್ತಿಕ, ಗ್ರಾಮದ ಅಭಿವೃದ್ಧಿಗೆ ಸಹಕಾರಿ ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಕೆರೆ ಅಭಿವೃದ್ಧಿ, ನಿರ್ವಹಣೆಗಾಗಿ ಕೆರೆ ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದೆ ಎಂದರು.
ತಾಲೂಕು ಯೋಜನಾಧಿಕಾರಿ ಕೆ.ಪ್ರಸಾದ್ ಮಾತನಾಡಿ, ಕೆರೆ ಅಭಿವೃದ್ಧಿಗೆ ಗ್ರಾಮಸ್ಥರು, ರೈತರು ತಮ್ಮೊಂದಿಗೆ ಕೈಜೋಡಿಸಿ ಕೆರೆಯಲ್ಲಿನ ಹೂಳು ತೆಗೆದುಕೊಂಡು ಹೋಗಿ ಕೃಷಿ ಭೂಮಿಗೆ ಹಾಕಿದರೆ ಉತ್ತಮ ಫಲವತ್ತತೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕೆರೆ ಸಮಿತಿ ಅಧ್ಯಕ್ಷ ಮಹದೇಶ, ದೇವರಾಜು, ಕುಮಾರ್, ಒಕ್ಕೂಟ ಅಧ್ಯಕ್ಷೆ ಯಶೋದಾ, ಕೃಷಿ ಮೇಲ್ವಿಚಾರಕ ಕೆ.ಟಿ.ಪ್ರವೀಣ್, ಸೇವಾ ಪ್ರತಿನಿಧಿಗಳಾದ ವಿಜಯಾ, ಮಂಗಳಾ, ಅರ್ಚಕ ಮೂರ್ತಿ ಮತ್ತಿತರರಿದ್ದರು.