ಕಿಕ್ಕೇರಿ ಹೋಬಳಿಯ ಮಾದಾಪುರ ಮುರಾರ್ಜಿ ವಸತಿ ಶಾಲೆಯಲ್ಲಿ ಆದರ್ಶ ಸುಗಮ ಸಂಗೀತಾ ಅಕಾಡೆಮಿ, ಸ್ಪಂದನಾ ಪೌಂಡೇಷನ್ ವತಿಯಿಂದ ಮಂಗಳವಾರ ಗಿಡ ನೆಟ್ಟು ನೀರೆರೆಯುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು. ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಶಾಂತಿ, ವೆಂಕಟೇಶ್, ದೇವರಾಜು, ಮಂಗಳಾ, ಪ್ರಸನ್ನ, ಸೌಮ್ಯಾ, ಜ್ಯೋತಿ ಮತ್ತಿತರರಿದ್ದರು.  
ಮಂಡ್ಯ

ಹಸಿರು ಉಸಿರಾದರೆ ಬದುಕು ಬಂಗಾರ

ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅಭಿಮತ

ಕಿಕ್ಕೇರಿ: ಪ್ರಕೃತಿ ಉಳಿವಿಗಾಗಿ ಗಿಡ ನೆಟ್ಟರೆ ಬದುಕಿಗೆ ಬಂಗಾರದಂತಹ ಭಾಗ್ಯ ಲಭಿಸಲಿದೆ ಎಂದು ಅಂತಾರಾಷ್ಟ್ರೀಯ ಸುಗಮ ಸಂಗೀತಾ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.
ಹೋಬಳಿಯ ಗಡಿ ಗ್ರಾಮದಲ್ಲಿನ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಆದರ್ಶ ಸುಗಮ ಸಂಗೀತಾ ಅಕಾಡೆಮಿ, ಸ್ಪಂದನಾ ಫೌಂಡೇಷನ್ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಿಡ ನೆಡಿ, ಆರೋಗ್ಯವಂತರಾಗಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದಷ್ಟೇ ಪರಿಸರ ಉಳಿಸುವ ಕಾಳಜಿ ಮೂಡಿಸುವುದು ಅವಶ್ಯವಿದೆ. ಮಾನಸಿಕ ನೆಮ್ಮದಿಗೆ ಸಂಗೀತ ಮದ್ದಾದರೆ, ಶುದ್ಧ ಗಾಳಿಗಾಗಿ ಹಸಿರು ವನ ಅವಶ್ಯ. ಗಿಡಮರ ಬೆಳೆಸುವುದರಿಂದ ಮಾತ್ರ ಪ್ರಾಕೃತಿಕವಾಗಿ ಶುದ್ಧ ಗಾಳಿ ಲಭಿಸಲಿದೆ ಎಂದರು.
ಪರಿಸರ, ಕನ್ನಡ ಶಾಲೆ, ಮಕ್ಕಳಿಗೆ ಸುಗಮ ಸಂಗೀತ ತರಬೇತಿ ನೀಡುವಂತಹ ಅಭಿಯಾನವನ್ನು ಆರಂಭಿಸಲಾಗಿದೆ. ಇದಕ್ಕೆ ಸಮಾನ ಮನಸ್ಕರ ಸಹಕಾರ ಬೇಕಿದೆ. ದೆಹಲಿಯಂತಹ ನಗರ ಪ್ರದೇಶಗಳಲ್ಲಿ ಶುದ್ಧ ಗಾಳಿ ಇಲ್ಲದೆ ಮನೆಯಿಂದ ಹೊರಬರಲಾಗುತ್ತಿಲ್ಲ. ಶ್ವಾಸಕೋಶ, ಉಸಿರಾಟದಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂತಹ ಸಮಸ್ಯೆ ಮುಂದಿನ ದಿನಗಳಲ್ಲಿ ಹಳ್ಳಿಗಾಡಿಗೂ ಬರಲಿದೆ. ಮನೆ, ಶಾಲೆ, ವಿಶಾಲವಾದ ಮೈದಾನಗಳಲ್ಲಿ ಮೊದಲು ಗಿಡ ಬೆಳೆಸುವ ಯಜ್ಞಕ್ಕೆ ಮುಂದಾಗಲು ಮಕ್ಕಳನ್ನು ಪ್ರೇರೇಪಿಸಿ. ಮಕ್ಕಳು ಸಮಾಜಕ್ಕೆ ಕೊಡುವ ಬಲುದೊಡ್ಡ ಕೊಡುಗೆ ಮರ ಗಿಡ ಬೆಳೆಸುವುದು ಎಂದು ತಿಳಿ ಹೇಳಿದರು.
ಸಾಲು ಮರದ ತಿಮ್ಮಕ್ಕನಂತೆ ನಮ್ಮ ಹಿರಿಯರು ರಸ್ತೆ ಬದಿಯಲ್ಲಿ ಗಿಡ ನೆಟ್ಟು ಪೋಷಿಸುತ್ತಿದ್ದರು. ಕಾಲ್ನಡಿಗೆಯಲ್ಲಿ ಬಹುತೇಕ ದೂರದ ಊರಿಗೆ ಸಾಗುವಾಗ ದಣಿವಾರಿಸಿಕೊಳ್ಳಲು ಸಹಾಯವಾಗುತ್ತಿತ್ತು. ಮರಗಿಡಗಳಿಂದ ಸಹಸ್ರಾರು ಪಕ್ಷಿಗಳಿಗೆ ಹಣ್ಣು ಹಂಪಲು ಸಿಕ್ಕಿ ಜೀವಿಸುತ್ತಿದ್ದವು. ಇಂತಹ ಪರಿಸರ ಮರುಕಳಿಸಲು ಮಕ್ಕಳು ಯಜ್ಞ ತೊಡಿ ಎಂದು ಹುರಿದುಂಬಿಸಿದರು.
ಪ್ರಾಂಶುಪಾಲೆ ಶಾಂತಿ ಮಾತನಾಡಿ, ನಮಗೆ ಮಕ್ಕಳಂತೆ ಮರಗಿಡಗಳು. ಇರುವಷ್ಟು ಜೀವಿತಾವಧಿಯಲ್ಲಿ ನಾವು ಸಮಾಜಕ್ಕೆ ನೀಡುವ ಕೊಡುಗೆ ಮರಗಿಡ ಬೆಳೆಸಿ ಉಳಿಸುವುದು ಆಗಬೇಕಿದೆ. ಮುಂದಿನ ಪೀಳಿಗೆಗೆ ನಾವು ನೀಡುವ ಈ ಕೊಡುಗೆ ಪ್ರಕೃತಿ ಮಾತೆಗೆ ನೀಡುವ ಕೊಡುಗೆ ಎಂಬುದನ್ನು ಮರೆಯಬಾರದು ಎಂದು ನುಡಿದರು.
ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಪ್ರಕೃತಿ ಕುರಿತಾದ ಬೆಳೆಸಿರಿ ಗಿಡಗಳನ್ನು ಉಳಿಸಿರಿ ಪರಿಸರವನ್ನು, ಬನ್ನಿರಿ ಬೆಳೆಸೋಣ, ಗಿಡಮರ ಉಳಿಸೋಣ, ನದಿಗಳ-ಗಿರಿವನಗಳ ಸಾಲೇ ಮತ್ತಿತರ.. ಪರಿಸರ ಗೀತೆಗಳನ್ನು ಹಾಡಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದರು. ಮಕ್ಕಳು ಪರಿಸರ ಉಳಿಸುವ ಸಂಕಲ್ಪದ ಪ್ರತಿಜ್ಞೆ ಮಾಡಿದರು.
ಪರಿಸರ ಪ್ರೇಮಿ ವೆಂಕಟೇಶ್, ವಕೀಲ ರಾಜೇಶ್, ಸಾಮಾಜಿಕ ಕಾರ್ಯಕರ್ತ ಮಾದಾಪುರ ಸುಬ್ಬಣ್ಣ, ಮಂಗಳಾ, ಜ್ಯೋತಿ, ಕಲಾವಿದರಾದ ಅಭಿಷೇಕ್, ಕೆ.ವಿ.ಬಲರಾಮು, ಪ್ರಾಂಶುಪಾಲೆ ಶಾಂತಿ, ಮುಖ್ಯಶಿಕ್ಷಕರಾದ ದೇವರಾಜು, ಜ್ಯೋತಿ, ಶಿಕ್ಷಕರಾದ ಪ್ರಕಾಶ್, ರಾಘವೇಂದ್ರ, ಜಗದೀಶ್, ಮಂಗಳಾ, ಲೀಲಾವತಿ, ಸೌಮ್ಯ, ವೀಣಾ, ಜಯಲಕ್ಷ್ಮೀ, ಪಲ್ಲವಿ, ಭೂಮಿಕಾ ಮತ್ತಿತರರಿದ್ದರು.