ಕಿಕ್ಕೇರಿ ಹೋಬಳಿಯ ಗೂಡೇಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹುಚ್ಚಲಮ್ಮ, ಚಿಕ್ಕಮ್ಮ ದೇಗುಲ ಲೋಕಾರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
- ಮನೆಯ ಮುಂದೆ ವರ್ಣರಂಜಿತ ರಂಗೋಲಿ, ತಳಿರು ತೋರಣಗಳಿಂದ ಶೃಂಗರ
ಕಿಕ್ಕೇರಿ: ಹೋಬಳಿಯ ಗಡಿಭಾಗದ ಗೂಡೇಹೊಸಹಳ್ಳಿ ಗ್ರಾಮದಲ್ಲಿ ಹುಚ್ಚಲಮ್ಮ, ಚಿಕ್ಕಮ್ಮ ದೇಗುಲ ಶುಕ್ರವಾರ ಲೋಕಾರ್ಪಣೆಗೊಂಡಿತು.
ದೇಗುಲಗಳ ಗ್ರಾಮ ಎಂದು ಕರೆಯುವ ಗ್ರಾಮದಲ್ಲಿ ಹತ್ತಾರು ದೇಗುಲಗಳಿದ್ದು, ಹೊಸದಾಗಿ ಈ ದೇಗುಲಗಳು ಲೋಕಾರ್ಪಣೆಯಾಗುತ್ತಿರುವುದಕ್ಕೆ ಗ್ರಾಮಸ್ಥರು ಸಂಭ್ರಮಿಸಿದರು.
ಎರಡು ದಿನಗಳ ಕಾಲ ಗ್ರಾಮದ ಎಲ್ಲ ಮನೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಮನೆಯ ಮುಂದೆ ವರ್ಣರಂಜಿತ ರಂಗೋಲಿ, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.
ಬೆಳಗ್ಗಿನ ಬ್ರಾಹ್ಮಿ ಮುಹೂರ್ತದಲ್ಲಿ ಗ್ರಾಮದ ಮಹಿಳೆಯರು ವೇದಘೋಷ, ಮಂಗಳವಾದ್ಯದೊಂದಿಗೆ ಸಮೀಪದಲ್ಲಿರುವ ಹೇಮಾವತಿ ನದಿಯಿಂದ ಪವಿತ್ರ ಗಂಗೆಯನ್ನು ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ತಂದರು.
ಪೂಜಾ ಕೈಂಕರ್ಯದಲ್ಲಿ ಪುಣ್ಯಾಹ ವಾಚನ, ದೇವನಂದಿ ಕಂಕಣಧಾರೆ, ಕೃಚ್ಛಾರಣೆ, ಗೋಪೂಜೆ, ಮಹಾ ಸಂಕಲ್ಪ, ಗ್ರಾಮ, ಸಭಾಪೂಜೆ, ವೇದಪಾರಾಯಣ, ಕಳಶ ಪೂಜೆ, ರಾಕ್ಷೋಘ್ನ, ದೀಕ್ಷಕಾಲ ಬಲಿ, ಆದಿವಾಸ ಬಂಧಶುದ್ಧ, ಪರಿವಾರ, ವಾಸ್ತು, ರುದ್ರ, ಕಲಾ, ಅಘೋರ ರುದ್ರ ಹೋಮ, ಪ್ರಸಾದ ವಾಸ್ತು ಪೂಜೆ, ಮಹಾ ಪೂರ್ಣಾಹುತಿ, ರಾಜಾಶೀರ್ವಾದ ನೆರವೇರಿತು.
ವಿಮಾನ ಗೋಪುರ ಕಳಶ ಪ್ರತಿಷ್ಠಾಪನೆ, ಕಲಾಕರ್ಷಣೆ, ಕಲಶಾಭಿಷೇಕ, ಬಿಂಬ ಪೂಜೆ, ಈಶ್ವರ ಲಿಂಗ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಅಂತಿಮವಾಗಿ ನಡೆಯಿತು.
ಭಕ್ತರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಮಹಾ ಮಂಗಳಾರತಿ, ತೀರ್ಥ ಪ್ರಸಾದ ಸ್ವೀಕರಿಸಿದರು. ಸಾಮೂಹಿಕ ಅನ್ನದಾಸೋಹ ಏರ್ಪಡಿಸಲಾಗಿತ್ತು.