ಬೆಳಗೊಳ ಗ್ರಾಮದ ಬಲಮುರಿ ರಸ್ತೆಯ ರಾಜು ಅವರ ಮನೆಯಲ್ಲಿ ಗ್ಯಾಸ್ ಸೋರಿಕೆ ಉಂಟಾಗಿ ಮನೆ ಸಂಪೂರ್ಣ ಸುಟ್ಟು ಹೋಗಿರುವುದು.
ಕೆ.ಆರ್.ಸಾಗರ: ಬೆಳಗೊಳ ಗ್ರಾಮದ ಬಲಮುರಿ ರಸ್ತೆಯಲ್ಲಿ ಗುರುವಾರ ಗ್ಯಾಸ್ ಸೋರಿಕೆ ಉಂಟಾಗಿ ಮನೆ ಸಂಪೂರ್ಣ ಸುಟ್ಟು ಹೋಗಿದೆ.
ಗ್ರಾಮದ ನಿವಾಸಿ ಗೌರಮ್ಮ ಅವರ ಮನೆಯಲ್ಲಿ ಮಗ ರಾಜು ಮತ್ತು ಸೊಸೆ ಅಶ್ವಿನಿ ವಾಸವಾಗಿದ್ದು, ಇಬ್ಬರೂ ಕೂಲಿ ಕೆಲಸಕ್ಕೆ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಮನೆಯಿಂದ ದಟ್ಟ ಹೊಗೆ ಬರುತ್ತಿದ್ದನ್ನು ಕಂಡ ಪಕ್ಕದ ಮನೆಯವರು ಕೆ.ಆರ್.ಸಾಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅಗ್ನಿಶಾಮಕ ಠಾಣೆಗೂ ಕರೆ ಮಾಡಿದ್ದರು.
ಕೆ.ಆರ್.ಸಾಗರ ಪಿಎಸ್‌ಐ ರಮೇಶ ಕರ್ಕಿಕಟ್ಟೆ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಬರುವ ವೇಳೆಗೆ ಮನೆ ಸಂಪೂರ್ಣ ಸುಟ್ಟು ಹೋಗಿದ್ದು , ಬೆಂಕಿಯನ್ನು ಹೆಬ್ಬಾಳು ಮತ್ತು ಶ್ರೀರಂಗಪಟ್ಟಣ ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು.
ಸ್ಥಳಕ್ಕೆ ಕೆ.ಆರ್.ಸಾಗರ ಆರಕ್ಷಕ ನಿರೀಕ್ಷಕ ವಿವೇಕಾನಂದ ಭೇಟಿ ನೀಡಿ ಮನೆ ಮಾಲೀಕರಿಂದ ಬೆಂಕಿ ಅನಾಹುತದಿಂದ ಆಗಿರುವ ನಷ್ಟಗಳಲ್ಲಿ ಹಣ, ವಸ್ತುಗಳ ಮಾಹಿತಿ ಪಡೆದರು. ಎರಡು ದಿನಗಳ ಹಿಂದೆ ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಪಡೆದಿದ್ದ 50 ಸಾವಿರ ರೂ. ನಗದು ಸೇರಿದಂತೆ ಮನೆಯ ವಸ್ತುಗಳು ಬೆಂಕಿಯಲ್ಲಿ ಸುಟ್ಟುಹೋಗಿದೆ ಎಂದು ತಿಳಿಸಿದರು.
ಮನೆಯಲ್ಲಿದ್ದ ಎಲ್ಲ ವಸ್ತುಗಳು ಬೆಂಕಿಗೆ ಸುಟ್ಟು ಕರಕಲು ಆಗಿದ್ದು, ಮನೆಯಲ್ಲಿದ್ದ ಸಿಲಿಂಡರ್‌ನಿಂದ ಗ್ಯಾಸ್ ಲೀಕ್ ಆಗಿ ಹೊರಹೊಗುತ್ತಿದ್ದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸರಿಪಡಿಸಿದರು. ಎರಡು ಸಿಲಿಂಡರ್‌ಗಳು ಸುಟ್ಟಿದರೂ ಸ್ಫೋಟವಾಗದ ಕಾರಣ ಭಾರಿ ಅನಾಹುತ ತಪ್ಪಿದೆ. ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳದಲ್ಲೇ 30 ಸಾವಿರ ರೂ. ನಗದು ವಿತರಣೆ
ಬೆಂಕಿ ಅವಘಡದಲ್ಲಿ ಮನೆ ಭಸ್ಮವಾದ ಅಶ್ವಿನಿ ಮತ್ತು ರಾಜು ದಂಪತಿಗೆ ಬೆಳಗೊಳ ಗ್ರಾಮ ಪಂಚಾಯಿತಿ ಸದಸ್ಯ ಅರವಿಂದ್ 25 ಸಾವಿರ ರೂ. ಹಾಗೂ ಸದಸ್ಯ ರ‌್ಯಾಂಬೋ ರವಿಕುಮಾರ್ 5 ಸಾವಿರ ರೂ. ನಗದನ್ನು ಸ್ಥಳದಲ್ಲೇ ನೀಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ವಿ. ಸುರೇಶ್ ದೂರವಾಣಿ ಮೂಲಕ ಶಾಸಕ ರಮೇಶ ಬಂಡಿಸಿದ್ದೇಗೌಡರಿಗೆ ಬೆಂಕಿ ಅನಾಹುತ ಕುರಿತು ಮಾಹಿತಿ ನೀಡಿದರು. ಸ್ಪಂದಿಸಿದ ಶಾಸಕರು ಸಹಾಯ ಮಾಡುವುದಾಗಿ ಮತ್ತು ಸರ್ಕಾರ ಯೋಜನೆಯಡಿ ತಕ್ಷಣ ಗ್ರಾ.ಪಂ. ಅನುದಾನದಲ್ಲಿ ಮನೆಕಟ್ಟಿ ಕೊಡುವ ಭರವಸೆ ನೀಡಿದರು.