ಮದ್ದೂರಿನ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಂಡವಪುರ ಪುಸ್ತಕ ಮನೆಯ ಅಂಕೇಗೌಡ ದಂಪತಿಗೆ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ನಿಶ್ಚಲಾನಂದನಾಥ ಸ್ವಾಮೀಜಿ, ಕೆ.ಟಿ.ಚಂದು, ಅಧ್ಯಕ್ಷ ಎಂ.ಸ್ವರೂಪ್‌ಚಂದ್, ಕಾರ್ಯದರ್ಶಿ ಅಪೂರ್ವ ಚಂದ್ರ, ಜಿ.ಎಸ್.ಶಿವರಾಮು, ಪದವಿ ಕಾಲೇಜು ಪ್ರಾಂಶುಪಾಲ ಡಾ. ಕಿರಣ್, ಪ.ಪೂ. ಕಾಲೇಜು ಪ್ರಾಂಶುಪಾಲ ಯು.ಎಸ್.ಶಿವಕುಮಾರ್ ಇತರರಿದ್ದರು. 
ಮಂಡ್ಯ

ಪುಸ್ತಕ ಸಂಸ್ಕೃತಿಯನ್ನು ಪ್ರೀತಿಸಬೇಕು

ಎ. ಆರ್. ರಘುರಾಮ
ಮದ್ದೂರು : ಪುಸ್ತಕ ಸಂಸ್ಕೃತಿಯನ್ನು ಪ್ರೀತಿಸಬೇಕು ಎಂದು ರಾಯಚೂರು ಸಂಸದ ಜಿ.ಕುಮಾರನಾಯಕ ಹೇಳಿದರು.
ನಗರದ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ವತಿಯಿಂದ ಎಚ್.ಕೆ.ವೀರಣ್ಣಗೌಡರ 128ನೇ ಜಯಂತಿ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ 95ನೇ ಜಯಂತಿ ಅಂಗವಾಗಿಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಂಡ್ಯ ಜಿಲ್ಲೆಯ ಪುಸ್ತಕದ ಮನೆಯೊಂದು ಜಿಲ್ಲೆ ಮತ್ತು ರಾಜ್ಯದ ಗಡಿಯನ್ನು ದಾಟಿ ರಾಷ್ಟ್ರದ ರಾಜಧಾನಿ ದೆಹಲಿಯಲ್ಲೂ ಖ್ಯಾತಿಗೆ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ಪದ್ಮಶ್ರೀ ಪುರಸ್ಕೃತರಾದ ಅಂಕೇಗೌಡ ದಂಪತಿ ಸಾಧನೆ ಅಪಾರವೆಂದರು. ಎಚ್.ಕೆ.ವೀರಣ್ಣಗೌಡ ಅವರ ಜೀವನ ಚರಿತ್ರೆ ಸಾಧನೆಯಿಂದ ಕೂಡಿದೆ. ಸ್ವಾತಂತ್ರೃದ ಕಿಚ್ಚು ಹಚ್ಚಲು ಅವರು ಪತ್ರಿಕೆಯನ್ನೇ ಹೊರತಂದ ನಾಯಕ ಎಂದರು. ದೇಶವು ದಾಸ್ಯದಿಂದ ಮುಕ್ತವಾಗಲು ಅವರ ಶ್ರಮ, ಸಂಘಟನೆ ಇಂದಿಗೂ ಅನುಕರಣೀಯ ಎಂದು ಬಣ್ಣಿಸಿದರು.ವಿವಿಧ ಸ್ತರದ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಕಾರ್ಯಸಾಧನೆಯಾಗುವಂತೆ ಪ್ರೇರಣೆ ನೀಡುತ್ತಿದ್ದ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ತಾವು ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಇದ್ದೆ. ಕೃಷ್ಣ ಅವರು ಒಬ್ಬ ಸಭ್ಯ ನಾಯಕ ಎಂದರು. ವಿಧಾನಸಭೆ ಸೇರಿದಂತೆ ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ, ವಿದೇಶಾಂಗ ವ್ಯವಹಾರ ಇನ್ನಿತರ ಹುದ್ದೆಗಳನ್ನು ಸಮರ್ಥವಾಗಿ ಕೃಷ್ಣ ರವರು ನಿರ್ವಹಣೆ ಮಾಡಿದ್ದಾರೆ ಎಂದು ಸ್ಮರಿಸಿಕೊಂಡರು.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ ಗೌಡ ಮಾತನಾಡಿ, ರಾಜ್ಯದ ಉತ್ತರ, ದಕ್ಷಿಣ ಭಾಗದ ಎಲ್ಲಾ ಚಟುವಟಿಕೆಗಳು ಪರಸ್ಪರ ವಿನಿಮಯವಾಗುವುದರೊಂದಿಗೆ ಅಭಿವೃದ್ಧಿಗೆ ಮುನ್ನುಡಿ ಬರೆದ ಹಿರಿಯರಾದ ಎಚ್.ಕೆ.ವೀರಣ್ಣಗೌಡ ಮತ್ತು ಎಸ್.ಎಂ.ಕೃಷ್ಣ ಅವರು ಸ್ಮರಣೀಯರು ಎಂದರು. ಅಂದಿನ ರೈತ ಚಳವಳಿಗಳು ಇಂದಿಗೂ ಮಾದರಿಯಾಗಿದೆ. ಆದರೆ ಇಂದು ಹೋರಾಟಗಳು ತೂಕ ಕಳೆದುಕೊಂಡಿವೆ ಎಂದು ಅವರು ವಿಷಾದಿಸಿದರು.
ಅಭಿನಂದನೆ:
ಪದ್ಮಶ್ರೀ ಪುರಸ್ಕೃತ ಪಾಂಡವಪುರ ಪುಸ್ತಕ ಮನೆಯ ಅಂಕೇಗೌಡ ಮತ್ತು ವಿಜಯಲಕ್ಷ್ಮೀ ದಂಪತಿಗೆ ಗಣ್ಯರು ವೀರಣ್ಣಗೌಡ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಎಸ್.ಸಂತೋಷ್, ಆರ್.ರುಕ್ಮಿಣಿ, ಎಂ.ರಾಜಣ್ಣ, ಜಿ.ಎಸ್.ಕಲಾವತಿ ಅವರನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು. ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಪ್ರೊ. ಪ್ರಕಾಶ್ ಮತ್ತು ಉದ್ಯಮಿ ಕೈಲಾಶ್, ಜಿ.ಗಣೇಶ್, ಎಂ.ಎನ್.ಅರುಣ, ಅಶೋಕ್, ಕಟ್ಟಡ ಕಾರ್ಮಿಕ ಗುಂಡ ಅವರನ್ನು ಗಣ್ಯರು ಸನ್ಮಾನಿಸಿದರು.
ಆಶೀರ್ವಚನ: ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ.ಚಂದು, ಅಧ್ಯಕ್ಷ ಎಂ.ಸ್ವರೂಪ್‌ಚಂದ್, ಕಾರ್ಯದರ್ಶಿ ಅಪೂರ್ವ ಚಂದ್ರ, ಜಿ.ಎಸ್. ಶಿವರಾಮು, ಎಚ್.ಕೆ.ವೀರಣ್ಣಗೌಡ ಪದವಿ ಕಾಲೇಜು ಪ್ರಾಂಶುಪಾಲ ಡಾ. ಕಿರಣ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಯು.ಎಸ್.ಶಿವಕುಮಾರ್ ಇತರರಿದ್ದರು.