ಮಂಡ್ಯ ತಾಲೂಕಿನ ವಿ.ಸಿ ಫಾರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
- ವಿ.ಸಿ ಫಾರಂನಲ್ಲಿ ಕ್ರೀಡಾ ಚಟುವಟಿಕೆ ಉದ್ಘಾಟನೆ
- ಕೃಷಿಕ ಅಲಯನ್ಸ್ ಸಂಸ್ಥೆ ಹಾಗೂ ನಂಜಮ್ಮ ಮೋಟೆಗೌಡ ಚಾರಿಟೆಬಲ್ ಟ್ರಸ್ಟ್ ನಿಂದ ಆಯೋಜನೆ
ಮಂಡ್ಯ: ಶೈಕ್ಷಣಿಕ ಕಲಿಕೆ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಕೌಶಲ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಬೇಕು ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ತಾಲೂಕಿನ ವಿ.ಸಿ ಫಾರಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಕೃಷಿಕ ಅಲಯನ್ಸ್ ಸಂಸ್ಥೆ ಹಾಗೂ ನಂಜಮ್ಮ ಮೋಟೆಗೌಡ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಮವಸ್ತ್ರ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಪುಸ್ತಕ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾತಿ, ಮತ, ಪಂಥ ಬೇಧವಿಲ್ಲದೇ ಎಲ್ಲ ವಿದ್ಯಾರ್ಥಿಗಳು ಒಂದೇ ಎಂಬ ಮನೋಭಾವನೆ ಬೆಳೆಸುವ ಉದ್ದೇಶವೇ ಸಮವಸ್ತ್ರದ ಪರಿಕಲ್ಪನೆ. ಹಾಗಾಗಿ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲೂ ಇದನ್ನು ಅರ್ಥಮಾಡಿಕೊಂಡು, ಏಕತೆ ಪಠ್ಯ ಕಲಿಕೆಯೊಂದಿಗೆ ಕ್ರೀಡೆ ಮತ್ತು ಸೃಜನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡಾ ಕೂಟದಿಂದ ಉದ್ಯೋಗ ಪಡೆದ ನಿದರ್ಶನಗಳಿವೆ, ಉತ್ತಮ ಕ್ರೀಡಾಪಟುವಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತಸ್ಥಾನ ಲಭಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಕಲಿಯುವುದರ ಜತೆಗೆ ಕೌಶಲ ಬೆಳೆಸಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಿ ಧೈರ್ಯದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಭವಿಷ್ಯ ರೂಪಿಸಿಕೊಳ್ಳಬೇಕು. ಅದನ್ನು ಬಿಟ್ಟು ಇತರೆಡೆಗೆ ತಮ್ಮ ಮನಸ್ಸು ಹರಿಸುವುದರಿಂದ ಉದ್ದೇಶ ದಿಕ್ಕುತಪ್ಪಿ ಭವಿಷ್ಯ ಹಾಳಾಗಿ ಅನಂತರ ಪರಿತಪಿಸುವುದು ಬೇಡ. ಆದ್ದರಿಂದ ವಿದ್ಯಾರ್ಥಿಗಳ ತಮ್ಮ ಅಮೂಲ್ಯ ಸಮಯವನ್ನು ಭವಿಷ್ಯ ರೂಪಿಸುವತ್ತ ಗಮನ ಹರಿಸಲು ಸಲಹೆ ನೀಡಿದರು.
ಅಲಯನ್ಸ್ ಸಂಸ್ಥೆ ಜಿಲ್ಲಾ ಸಂಪುಟ ಕಾರ್ಯದರ್ಶಿ ಜಿ.ಧನಂಜಯ ಧರಸಗುಪ್ಪೆ, ಸ್ವಾತಂತ್ರ್ಯ ದಿನಾಚರಣೆ, ರಾಷ್ಟ್ರಧ್ವಜದ ಪರಿಕಲ್ಪನೆ, ವಿನ್ಯಾಸಗೊಂಡ ಇತಿಹಾಸ, ಧ್ವಜಾರೋಹಣ, ಧ್ವಜಾವರೋಹಣ, ಧ್ವಜವಂದನೆ, ಶಿಸ್ತು, ಧ್ವಜ ಬಳಸುವ ವಿಧಾನ ಹಾಗೂ ರಾಷ್ಟ್ರ ಧ್ವಜದ ಸಂಹಿತೆ ಬಗ್ಗೆ ಅರಿವು ಮೂಡಿಸಿದರು.
ಪ್ರಾಂಶುಪಾಲೆ ಜಿ.ಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಲಯನ್ಸ್ ಸಂಸ್ಥೆಯ ಕೃಷ್ಣಪ್ಪ, ಲೋಕೇಶ್, ಉಪನ್ಯಾಸಕರಾದ ಚಂದ್ರಕಲಾ, ತುಳಸಿ, ತ್ರಿವೇಣಿ, ಪ್ರಿಯಾ, ಅಮೂಲ್ಯ ಇತರರಿದ್ದರು.
ಇದೇ ಸಂದರ್ಭದಲ್ಲಿ ಕಳೆದ ಬಾರಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪುಸ್ತಕ ವಿತರಿಸಲಾಯಿತು.