ಮಂಡ್ಯ ತಾಲೂಕು ಕೀಲಾರ ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
- ಕೀಲಾರ ಗ್ರಾಮದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ
- ಕ್ಷೀರಸಾಗರ ಮಿತ್ರಕೂಟದಿಂದ ಆಯೋಜನೆ
ಮಂಡ್ಯ: ವಿದ್ಯಾರ್ಥಿಗಳು ಮತ್ತು ಯುವಜನರು ಕೆ.ವಿ.ಶಂಕರಗೌಡ ಅವರಂತಹ ಧೀಮಂತ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸಲಹೆ ನೀಡಿದರು.
ತಾಲೂಕಿನ ಕೀಲಾರ ಗ್ರಾಮದಲ್ಲಿ ಕ್ಷೀರಸಾಗರ ಮಿತ್ರಕೂಟದಿಂದ ಆಯೋಜಿಸಿದ್ದ ನಿತ್ಯ ಸಚಿವ ಕೆ.ವಿ.ಶಂಕರಗೌಡರ 111ನೇ ಜನ್ಮೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಂಡು ಚೆನ್ನಾಗಿ ಓದಿ ನಿಮ್ಮ ಹೆತ್ತವರಿಗೆ ಕೀರ್ತಿ ತರುವಂತಹ ಕೆಲಸ ಮಾಡಬೇಕು ಎಂದರು.
ಶೈಕ್ಷಣಿಕವಾಗಿ ಯಾವುದೇ ವಿದ್ಯಾರ್ಥಿಗಳಿಗೆ ಸಹಾಯ ಬೇಕಾದಲ್ಲಿ ನಾನು ಸದಾ ಸಿದ್ಧನಿದ್ದೇನೆ ಬಳಸಿಕೊಳ್ಳಿ. ಮಿತ್ರಕೂಟವು ಬೆಳ್ಳಿ ಹಬ್ಬದ ನೆನಪಿನ ಸಾಂಸ್ಕೃತಿಕ ಭವನದ ಮುಂದುವರೆದ ಕಾಮಗಾರಿಗೆ ಅವರ ಅನುದಾನದಲ್ಲಿ 5 ಲಕ್ಷ ರೂ ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ರಿಯಾ ಅಕಾಡೆಮಿ ಸಂಸ್ಥಾಪಕಿ ಡಾ.ಕೆ.ಎಸ್.ಉಷಾ ವಸಂತ್, ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಸಮಯದಲ್ಲಿ ಮನಸ್ಸನ್ನು ಚಂಚಲಗೊಳಿಸದೆ ಹೆಚ್ಚು ಶ್ರಮ ವಹಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಎಂ.ವಿ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಆರ್.ಶಿವಾನಂದ ಮತ್ತು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿದರು. ಕೆ.ವಿ.ಶಂಕರಗೌಡ ಅವರ ಹಿರಿಯ ಪುತ್ರಿ ನಿರ್ಮಲಾ ಚಿಕ್ಕಲಿಂಗಯ್ಯ, ಮಾತೃಶ್ರೀ ಎಜುಕೇಷನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ಚಂದ್ರಶೇಖರ್, ಮಿತ್ರಕೂಟದ ಅಧ್ಯಕ್ಷ ಕೆ.ಜಯಶಂಕರ್, ಪೋಷಕ ಡಿ.ಶಿವರಾಜು, ಅಧೀಕ್ಷಕ ಇಂಜಿನಿಯರ್ ಎಚ್.ಎಂ.ರಾಮಚಂದ್ರು, ಸಂಚಾಲಕ ಕೆ.ಎಂ.ಕೃಷ್ಣೇಗೌಡ, ಕಾರ್ಯದರ್ಶಿ ನಾಗೇಶ್, ಖಚಾಂಜಿ ಕೆ.ಎಚ್.ರಮೇಶ್, ಉಪಾಧ್ಯಕ್ಷ ಕೆ.ವಿ.ಮಂಚೇಗೌಡ, ನಿರ್ದೇಶಕರಾದ ಕೆ.ಆರ್.ರಮೇಶ್, ಕೆ.ಎನ್.ಚೌಡೇಗೌಡ, ಪ್ರೊ.ಮಾನಸಾ ಇದ್ದರು.
ಇದೇ ವೇಳೆ ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಕೀಲಾರದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯ ಸಹಕಾರಿ ಎಸ್.ಕೃಷ್ಣ ಅವರನ್ನು ಮಿತ್ರಕೂಟದ ಗೌರವಾಧ್ಯಕ್ಷ ಕೆ.ಪಿ.ವೀರಪ್ಪ ಅಭಿನಂದಿಸಿದರು.