ನಾಗಮಂಗಲ ತಾಲೂಕು ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪೂಜಾ ಕಾರ್ಯಕ್ರಮವನ್ನು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನೆರೆವೇರಿಸಿದರು.
ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮಂಗಳವಾರ ಸಂಜೆ ಹೋಮ, ಹವನಾದಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ಜರುಗಿದವು.
ಗಣಪತಿ ಹೋಮ, ಚಂಡಿಕಾ ಹೋಮ ಸೇರಿದಂತೆ ಹಲವು ಬಗೆಯ ಪೂಜಾ ಕಾರ್ಯಕ್ರಮಗಳು ನಡೆದವು. ಕ್ಷೇತ್ರದ ಅಧಿದೇವತೆಗಳಾದ ಶ್ರೀ ಕಾಲಭೈರವೇಶ್ವರ, ಗಂಗಾಧರೇಶ್ವರಸ್ವಾಮಿ ಸೇರಿದಂತೆ ಎಲ್ಲ ದೇವಾಲಯಗಳಿಗೂ ತಳಿರು ತೋರಣಗಳೊಂದಿಗೆ ಹಸಿರು ಶೃಂಗರಿಸಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಹಾ ಸಮಾಧಿಗೂ ಅಲಂಕಾರ ಮಾಡಿ ಪೂಜೆ ಸಲ್ಲಿಸುವ ಮೂಲಕ ಶ್ರೀ ಗುರುವಿಗೆ ನಮಿಸಿದರು.
ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಸೋಮನಾಥ ಸ್ವಾಮೀಜಿ ಸೇರಿದಂತೆ ಆದಿಚುಂಚನಗಿರಿ ಶಾಖಾ ಮಠದ ಸಾಧು-ಸಂತರು ಸೇರಿದಂತೆ ಅನೇಕ ಭಕ್ತರು ಹಾಜರಿದ್ದರು.