ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದ ಬಳಿ ಆಯೋಜಿಸಿದ್ದ ರಾಜ್ಯಮಟ್ಟದ ಜೋಡಿ ಕರುಗಳ ಚಕ್ಕಡಿ ಓಟದ ಸ್ಪರ್ಧೆಯ ನೋಟ.
- ಪಾಂಡವಪುರ ತಾಲೂಕಿನ ಕೆನ್ನಾಳು ಬಳಿ ಆಯೋಜನೆ
ಪಾಂಡವಪುರ: ತಾಲೂಕಿನ ಕೆನ್ನಾಳು ಗ್ರಾಮದ ಬಳಿ ಆಯೋಜಿಸಿದ್ದ ಮೊದಲನೇ ವರ್ಷದ ರಾಜ್ಯಮಟ್ಟದ ಜೋಡಿ ಕರುಗಳ ಚಕ್ಕಡಿ ಓಟದ ಸ್ಪರ್ಧೆಯಲ್ಲಿ ಹೊಳೆನರಸಿಪುರ ಕುಳ್ಳಿಕಿಂಗ್ ಕುಳ್ಳಿ ಜೋಡಿ ಕರುಗಳು ಪ್ರಥಮ ಬಹುಮಾನ ಪಡೆದವು.
ಗ್ರಾಮದ ಜಯಚಾಮರಾಜೇಂದ್ರ ಕಲಾ ಸಂಘದಿಂದ ಇತ್ತೀಚೆಗೆ ಕನಸಿನ ರೇಸ್ ಶೀರ್ಷಿಕೆಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯ ವಿವಿಧ ಕಡೆಗಳಿಂದ ದೇಸಿ ತಳಿಯ 97ಕ್ಕೂ ಹೆಚ್ಚು ಜೋಡಿ ಕರುಗಳು ಚಕ್ಕಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಎರಡು ಕಣದಲ್ಲಿ ಒಂದು ಬಾರಿಗೆ ಎರಡು ಜತೆಯ ಜೋಡಿ ಕರುಗಳು ಚಕ್ಕಡಿ ಓಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಿಗ್ಗೆ ಪ್ರಾರಂಭವಾದ ಸ್ಪರ್ಧೆಯು ರಾತ್ರಿವರೆಗೂ ನಡೆಯಿತು.
ರಾತ್ರಿ ನಡೆದ ಫೈನಲ್‌ನಲ್ಲಿ ಪ್ರಥಮ ಬಹುಮಾನ ಹೊಳೆನರಸಿಪುರ ಕುಳ್ಳಿಕಿಂಗ್ ಕುಳ್ಳಿ (8 ಗ್ರಾಂ ಚಿನ್ನ), ಎರಡನೇ ಬಹುಮಾನ ನಗುವಿನಹಳ್ಳಿ ಕುಳ್ಳಿಗಿಲ್ಲಿ (ಬೈಕ್), ಮೂರನೇ ಬಹುಮಾನ ಕೆನ್ನಾಳು ಎಸ್‌ಆರ್‌ಎಸ್ ಕರಸರ್ಜಾ (30 ಸಾವಿರ), ನಾಲ್ಕನೇ ಬಹುಮಾನ ಕೆನ್ನಾಳು ದಳಪತಿ ದಾದಾ (15 ಸಾವಿರ), ಐದನೇ ಬಹುಮಾನ ಚಿಕ್ಕಯನಹಳ್ಳಿ ಗಾಂಧಿರಾಣಿ (10 ಸಾವಿರ), ಆರನೇ ಬಹುಮಾನ ಬಾಬುರಾಯನಕೊಪ್ಪಲು ಮುಬಾರಕ್ ನಾಗಮಣಿ (8ಸಾವಿರ) ಹಾಗೂ ಏಳನೇ ಬಹುಮಾನ ಸಿದ್ದಲಿಂಗಪುರ ಗ್ರಾಮದ ಜೋಡಿ ಕರುಗಳು (5ಸಾವಿರ) ಬಹುಮಾನ ಪಡೆದವು.
ಸಂಸದ ಯದುವೀರ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡ ಸಚ್ಚಿದಾನಂದ, ರೈತ ಸಂಘದ ಮುಖಂಡ ಶಂಕರೇಗೌಡ, ರಾಘವ ಪ್ರಕಾಶ್ ಇತರರು ಇದ್ದರು.