ಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ನ್ಯಾಯಾಲಯದ ಮುಂಭಾಗದಿಂದ ಟಿ.ಬಿ.ಸರ್ಕಲ್ ಮಾರ್ಗವಾಗಿ ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್, ವಾಕಿಂಗ್ ಪಾತ್, ರಸ್ತೆ ಮಧ್ಯದಲ್ಲಿ ಡಿವೈಡರ್ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಟಿ.ಮಂಜು ಭೂಮಿಪೂಜೆ ನೆರವೇರಿಸಿದರು. ಎಚ್.ಕೆ.ಅಶೋಕ್, ಕೆ.ಆರ್.ಹೇಮಂತಕುಮಾರ್ ಇತರರು ಇದ್ದರು. 
ಮಂಡ್ಯ

ಸರ್ಕಾರ ಸಹಕರಿಸಿದರೆ ಪಟ್ಟಣಕ್ಕೆ ಹೈಟೆಕ್ ಸ್ಪರ್ಶ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಟಿ.ಮಂಜು ಹೇಳಿಕೆ
  • ಕೆ.ಆರ್.ಪೇಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಕೆ.ಆರ್.ಪೇಟೆ: ಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ನ್ಯಾಯಾಲಯದ ಮುಂಭಾಗದಿಂದ ಟಿ.ಬಿ.ಸರ್ಕಲ್ ಮಾರ್ಗವಾಗಿ ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಟಿ.ಮಂಜು ಭೂಮಿಪೂಜೆ ನೆರವೇರಿಸಿದರು.
ಸುಮಾರು ನಾಲ್ಕುವರೆ ಕೋಟಿ ರೂ. ವೆಚ್ಚದಲ್ಲಿ ಕೆ-ಶಿಪ್ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಪಟ್ಟಣ ವ್ಯಾಪ್ತಿಯ 1ಕಿ.ಮೀ ವಿಸ್ತೀರ್ಣದಲ್ಲಿ ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್, ವಾಕಿಂಗ್ ಪಾತ್, ರಸ್ತೆ ಮಧ್ಯದಲ್ಲಿ ಡಿವೈಡರ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕರ್ನಾಟಕ ಕೆ-ಶಿಪ್ ಇಲಾಖೆ ವತಿಯಿಂದ ಕಾಮಗಾರಿ ನಡೆಸಲಾಗುತ್ತಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಮೂಲಕ ಪಟ್ಟಣದ ಅಂದ-ಚೆಂದವನ್ನು ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು. ರಸ್ತೆಯಲ್ಲಿ ಪ್ರಮುಖವಾಗಿ ನ್ಯಾಯಾಧೀಶರು, ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಡಿಪ್ಲೊಮಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಓಡಾಡುವ ಜಾಗವಾಗಿದೆ. ಹಾಗಾಗಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಶಾಸಕರು ಸಲಹೆ ನೀಡಿದರು.
ರಾಜ್ಯ ಸರ್ಕಾರವು ನಮ್ಮ ಬೇಡಿಕೆಗೆ ಸ್ಪಂದಿಸಿದರೆ ಇಡೀ ಪಟ್ಟಣದ ಅಂದವನ್ನು ಇದೇ ಮಾದರಿಯಲ್ಲಿ ಹೈಟೆಕ್ ಸ್ಪರ್ಶ ನೀಡುತ್ತೇನೆ. ಆದರೆ ರಾಜ್ಯ ಸರ್ಕಾರವು ವಿರೋಧ ಪಕ್ಷದ ಶಾಸಕ ಎಂದು ನಮಗೆ ಸೂಕ್ತ ಅನುದಾನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂಬರುವ ಪುರಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಎಲ್ಲ 23 ವಾರ್ಡ್‌ಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಸ್ಪರ್ಧೆ ಮಾಡಲಾಗುವುದು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಯಾವುದೇ ವಾರ್ಡ್‌ಗಳಲ್ಲಿ ಸರಿಯಾದ ರಸ್ತೆಗಳಲ್ಲಿ, ಚರಂಡಿ ವ್ಯವಸ್ಥೆ ಇಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಸರಿಪಡಿಸಲು ಕ್ರಮವಹಿಸುತ್ತೇನೆ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಪುರಸಭೆಯ ಮಾಜಿ ಸದಸ್ಯ ಕೆ.ಆರ್.ಹೇಮಂತಕುಮಾರ್, ಕೋಳಿ ನಾಗರಾಜು, ಇಂದ್ರಾಣಿ ವಿಶ್ವನಾಥ್, ಟೈಲರ್ ದಿನೇಶ್, ಮುಖಂಡ ಪಿಕೆಜಿ ಮಹೇಶ್, ಅಗ್ರಹಾರಬಾಚಹಳ್ಳಿ ಲೋಕೇಶ್, ಸಚಿನ್ ಕೃಷ್ಣ, ಪ್ರಥಮ ದರ್ಜೆ ಗುತ್ತಿಗೆದಾರ ನಾಗಮಂಗಲ ಅಂಬರೀಷ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಹಾಗೂ ಕೆಶಿಪ್ ಅಧಿಕಾರಿಗಳು ಸೇರಿದಂತೆ ಪುರಸಭಾ ವ್ಯಾಪ್ತಿಯ ಹೊಸಹೊಳಲು ಮತ್ತು ಕೆ.ಆರ್.ಪೇಟೆ ಅವಳಿ ಪಟ್ಟಣಗಳ ಜೆಡಿಎಸ್ ಮುಖಂಡರು ಹಾಜರಿದ್ದರು.