ಮಂಡ್ಯ ತಾಲೂಕು ತಿಮ್ಮನಹೊಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನವೀಕೃತ ಶೌಚಾಲಯ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು.
- ಪ್ಲಾಟಿನಂ ಸಿಟಿ ಅಧ್ಯಕ್ಷೆ ಸಂಧ್ಯಾ ಉದ್ಘಾಟನೆ
- ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೆ
ಮಂಡ್ಯ: ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಹಾಗೂ ನೈರ್ಮಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಮಂಡ್ಯ ದಕ್ಷಿಣ ವಲಯ ವ್ಯಾಪ್ತಿಯ ತಾಲೂಕಿನ ತಿಮ್ಮನಹೊಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಸಂಸ್ಥೆಯ ವತಿಯಿಂದ 2.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ನವೀಕೃತ ಶೌಚಗೃಹವನ್ನು ರೋಟರಿ ಬೆಂಗಳೂರು ಪ್ಲಾಟಿನಂ ಸಿಟಿಯ ಅಧ್ಯಕ್ಷೆ ಸಂಧ್ಯಾ ರಘುನಂದನ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಅವರು ಬಳಸಲು ಸುಸಜ್ಜಿತವಾದ ವ್ಯವಸ್ಥೆ ಇರಬೇಕು ಎಂಬ ಉದ್ದೇಶದಿಂದ ಕಳೆದ ಒಂದೂವರೆ ತಿಂಗಳಿನಿಂದ ಈ ಶೌಚಗೃಹದ ನವೀಕರಣ ಕಾರ್ಯ ನಡೆಸಲಾಗಿದೆ. ಈ ಯೋಜನೆ ಜಾರಿಗೆ ಬರಲು ಸಹಾಯಕ ಪ್ರಾಂತಪಾಲ ಅಕ್ಷರಂ ವೆಂಕಟೇಶ್ ಅವರ ಕೊಡುಗೆ ಅನನ್ಯ ಎಂದು ಬಣ್ಣಿಸಿದರು.
ಸಕ್ಕರೆನಾಡು ರೋಟರಿ ಸಂಸ್ಥೆಯ ಕಮಿಟಿ ಸರ್ವಿಸ್ ಛೇರ್ಮನ್ ನಾರಾಯಣ್ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವು ಮತ್ತು ಅಭಿವೃದ್ಧಿ ನಮ್ಮೆಲ್ಲರ ಜವಾಬ್ದಾರಿ. ಕಳೆದ 3 ವರ್ಷದಿಂದ ಅನುಬಂಧ ಯೋಜನೆಯಡಿ ರೋಟರಿ ಸಂಸ್ಥೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಸುಸಜ್ಜಿತ ಶೌಚಗೃಹವಿದ್ದರೆ ಹೆಣ್ಣು ಮಕ್ಕಳು ಶಾಲೆಗೆ ಬರಲು ಹೆಚ್ಚು ಅನುಕೂಲವಾಗುತ್ತದೆ. ಶೌಚಗೃಹ ನಿರ್ಮಾಣವಷ್ಟೇ ಅದರ ನಿರ್ವಹಣೆಯೂ ಮುಖ್ಯ. ನೀರಿನ ಸೌಲಭ್ಯದೊಂದಿಗೆ ಅದನ್ನು ಪ್ರತಿನಿತ್ಯ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಶಿಕ್ಷಕ ಯೋಗೇಶ್ ಮಾತನಾಡಿದರು. ರೋಟರಿ ಬೆಂಗಳೂರು ಪ್ಲಾಟಿನಂ ಸಿಟಿ ಕಾರ್ಯದರ್ಶಿ ರಜಿನಿ ಮೆನನ್, ಸಕ್ಕರೆನಾಡು ರೋಟರಿ ಕಾರ್ಯದರ್ಶಿ ಕೆ.ಎಸ್.ಅರುಣ್ ಕುಮಾರ್, ಬಸವರಾಜು, ಶಾಲಾ ಶಿಕ್ಷಕರಾದ ಮಂಚೇಗೌಡ, ಮಲ್ಲೇಶಗೌಡ, ರಾಣಿ, ಪ್ರತಿಮಾ, ನಾಗರತ್ನಾ, ಮಾದಯ್ಯ, ಇಂದುಮತಿ, ಅಶ್ವಿನಿ, ಸತೀಶ್ ಹಾಜರಿದ್ದರು.
ಸರ್ಕಾರಿ ಶಾಲೆ ಉಳಿಯಬೇಕು
ರೋಟರಿ ಸಂಸ್ಥೆಯ ಸಹಾಯಕ ಪ್ರಾಂತಪಾಲ ಅಕ್ಷರಂ ವೆಂಕಟೇಶ್ ಮಾತನಾಡಿ, ರೋಟರಿ ಸಂಸ್ಥೆಯು ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದವರ ಬಾಳಿಗೆ ಆಸರೆಯಾಗುವ ಜತೆಗೆ ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಬೇಕು ಎಂಬ ಸದುದ್ದೇಶದಿಂದ ಯೋಜನೆ ರೂಪಿಸುತ್ತಿದೆ. ಅದರಂತೆ ಶೌಚಗೃಹ ನಿರ್ಮಾಣ, ವಾಟರ್ ಫೀಲ್ಟರ್ ವಿತರಣೆ, ಸೈಕಲ್ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರಿ ಶಾಲೆಗಳ ಉಳಿವಿಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.