ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ಮೇಲ್ಗಾಲುವೆ ನಿರ್ಮಾಣಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಭೂ ಪರಿಹಾರ ನೀಡಲು ವಿಳಂಬ ಮಾಡಿದ ಹೇಮಾವತಿ ನಡಿ ಯೋಜನೆಯ ಎಚ್‌ಎಲ್‌ಬಿಸಿ ನಂ.3 ಕಚೇರಿಯನ್ನು ನ್ಯಾಯಾಲಯದ ಆದೇಶದಂತೆ ಕೋರ್ಟ್ ಸಿಬ್ಬಂದಿ ಹಾಗೂ ವಕೀಲರ ಸಮ್ಮುಖದಲ್ಲಿ ಜಪ್ತಿ ಮಾಡಲಾಯಿತು.
ಕೆ.ಆರ್.ಪೇಟೆ: ತಾಲೂಕಿನ ಹೊಸಹೊಳಲು ಮೇಲ್ಗಾಲುವೆ ನಿರ್ಮಾಣಕ್ಕೆ ಜಮೀನು ಕಳೆದುಕೊಂಡ 40 ರೈತರಿಗೆ ಭೂ ಪರಿಹಾರ ನೀಡಲು ವಿಳಂಬ ಮಾಡಿದ ಹೇಮಾವತಿ ಎಡದಂಡೆ ನಾಲಾ ಯೋಜನೆಯ (ಎಚ್‌ಎಲ್‌ಬಿಸಿ) ನಂ.3 ಕಚೇರಿಯನ್ನು ಮಂಡ್ಯ ಜಿಲ್ಲಾ ಮತ್ತು ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯದ ಆದೇಶದಂತೆ ಕೋರ್ಟ್ ಸಿಬ್ಬಂದಿ ಹಾಗೂ ವಕೀಲರ ಸಮ್ಮುಖದಲ್ಲಿ ಶುಕ್ರವಾರ ಜಪ್ತಿ ಮಾಡಲಾಯಿತು.
ಹೊಸಹೊಳಲು ಮೇಲ್ಗಾಲುವೆ ಯೋಜನೆಗಾಗಿ ಕೆ.ಆರ್.ಪೇಟೆ ತಾಲೂಕಿನ 40ಕ್ಕೂ ಹೆಚ್ಚು ರೈತರ ಫಲವತ್ತಾದ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ನಿಗದಿತ ಅವಧಿಯಲ್ಲಿ ಭೂ ಪರಿಹಾರ ಪಾವತಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ಸಂಕಷ್ಟಕ್ಕೆ ಸಿಲುಕಿದ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಂಡ್ಯ ಜಿಲ್ಲಾ ಹಾಗೂ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯ, ರೈತರ ಪರವಾಗಿ ಆದೇಶ ನೀಡಿ ಭೂ ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ಎಚ್‌ಎಲ್‌ಬಿಸಿ ನಂ.3 ಕಚೇರಿಯಲ್ಲಿರುವ ಸಾಮಗ್ರಿಗಳನ್ನು ಜಪ್ತಿ ಮಾಡಿ, ಪರಿಹಾರ ಮೊತ್ತ ವಸೂಲಿ ಮಾಡುವಂತೆ ನ್ಯಾಯಾಲಯದ ಸಿಬ್ಬಂದಿಗೆ ಸೂಚಿಸಿದ್ದರು. ಆದೇಶದ ಮೇರೆಗೆ ಕಚೇರಿಯಲ್ಲಿದ್ದ ಕಂಪ್ಯೂಟರ್, ಪ್ರಿಂಟರ್, ಟೇಬಲ್, ಚೇರ್ ಸೇರಿದಂತೆ ಎಲ್ಲ ಪೀಠೋಪಕರಣ ಜಪ್ತಿ ಮಾಡಲಾಯಿತು.
ರೈತ ಪರ ವಕೀಲ ವಿ.ಎಸ್ ಧನಂಜಯ್ ಕುಮಾರ್, ರೈತರಾದ ವಿಷಕಂಠ, ಕೃಷ್ಣೇಗೌಡ, ರಮೇಶ್, ಸ್ವಾಮಿ ಕೆ.ಎಸ್., ಶ್ರೀನಿವಾಸ್, ರಾಮಕೃಷ್ಣೇಗೌಡ, ಬೆಟ್ಟೇಗೌಡ, ಚಲುವಯ್ಯ, ಮಹೇಶ್ ಗೌಡ, ಬೋರಲಿಂಗೇಗೌಡ, ಮೊಗಣ್ಣೇಗೌಡ,ನಾಗರಾಜಯ್ಯ, ಎಂ.ಪಿ ಪುಟ್ಟರಾಜು, ಪಿ.ಜೆ.ನಾರಾಯಣಸ್ವಾಮಿ, ಪ್ರಕಾಶ್, ಶಿವರಾಮು, ಜಗದೀಶ್, ಕುಳ್ಳೇಗೌಡ, ಸೋಮನಾಥ, ಸೇರಿದಂತೆ ರೈತರು ಇದ್ದರು.