ಮಂಡ್ಯ ತಾಲೂಕು ಬೂದನೂರು ಗ್ರಾಮದಲ್ಲಿ ನಡೆಯಲಿರುವ ಉತ್ಸವಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಶಾಸಕ ಪಿ.ರವಿಕುಮಾರ್ ಗಣಿಗ ಆಹ್ವಾನಿಸಿದರು. 
ಮಂಡ್ಯ

ಹತ್ತು ವಿದ್ಯಾರ್ಥಿಗಳು, ಐವರು ರೈತರಿಗೆ ಉಚಿತ ಹೆಲಿಕಾಪ್ಟರ್ ಪ್ರಯಾಣ: ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಮೂರು ದಿನ ನಡೆಯಲಿರುವ ಹೆಲಿಟೂರಿಸಂ
  • ಚಿಕ್ಕಮಂಡ್ಯ ಗ್ರಾಮದ ಸಮೀಪ ಹೆಲಿಪ್ಯಾಡ್ ನಿರ್ಮಾಣ
ಮಂಡ್ಯ: ತಾಲೂಕಿನ ಬೂದನೂರು ಉತ್ಸವದ ಅಂಗವಾಗಿ ಫೆ.20ರಿಂದ ಚಿಕ್ಕಮಂಡ್ಯದ ಸಮೀಪ ಮೂರು ದಿನ ನಡೆಯಲಿರುವ ಹೆಲಿಟೂರಿಸಂನಲ್ಲಿ ಸರ್ಕಾರಿ ಶಾಲೆ ಹಾಗೂ ಕಾಲೇಜಿನ ಹತ್ತು ವಿದ್ಯಾರ್ಥಿಗಳು ಹಾಗೂ ಐವರು ಪ್ರಗತಿಪರ ರೈತರನ್ನು ಉಚಿತವಾಗಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದ್ದಾರೆ.
ಬೂದನೂರು ಒಂದು ಐತಿಹಾಸಿಕ ಕ್ಷೇತ್ರ. 15ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಹಳೆಯ ಬೂದನೂರಿನಲ್ಲಿ ವಾಸ್ತುಶಿಲ್ಪಗಳು ಕುರುಹು ಮತ್ತು ಹಲವು ಶಾಸನಗಳು ದೊರಕಿವೆ. ಹೊಸ ಬೂದನೂರಿನಲ್ಲಿರುವ ಅನಂತಪದ್ಮನಾಭ ದೇವಸ್ಥಾನ ವಿಶೇಷವಾಗಿದೆ. 21ರಂದು ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ ನೀಡಲಿದ್ದಾರೆ. ಫೆ.17ರಂದು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿದ್ದು, ವಿಜಯಶಾಲಿಗಳಿಗೆ ವಿಶೇಷ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಗುವುದು. ಫೆ.18 ಮತ್ತು 19ರಂದು ಕಸಬಾ ಹೋಬಳಿಯ 30 ಗ್ರಾಮದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಮನೆಗೊಂದು ರಂಗೋಲಿ ಮನೆಗೊಂದು ಗ್ಯಾರಂಟಿ ಎನ್ನುವ ನಿಟ್ಟಿನಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ವಿತರಿಸಲಾಗುವುದು. ಫೆ.18ರಂದು ಕ್ರೀಡಾ ಇಲಾಖೆ ವತಿಯಿಂದ ಹಗ್ಗ ಜಗ್ಗಾಟ, ಲೆಮನ್ ಸ್ಪೋನ್, ಕಬಡ್ಡಿ, ಖೋಖೋ ಸೇರಿದಂತೆ ವಿವಿಧ ರೀತಿಯ 10 ಕ್ರೀಡೆಗಳನ್ನು ಕೊಮ್ಮೇರಹಳ್ಳಿ ವಿಶ್ವಮಾನವ ಶಾಲೆಯಲ್ಲಿ ಏರ್ಪಡಿಸಲಾಗಿದೆ ಎಂದಿದ್ದಾರೆ.
ಫೆ.20ರಂದು ಹೊಸ ಬೂದನೂರಿನ ದೇವಸ್ಥಾನದ ಆವರಣದಲ್ಲಿ ಆಹಾರಮೇಳ ಮತ್ತು ಸಂಜೆ ಅಗ್ನಿಶಾಮಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಉತ್ಸವದ ಅಂಗವಾಗಿ ಹಳೆ ಬೂದನೂರುನಿಂದ ಮೆರವಣಿಗೆ ಮಾಡಲಾಗುತ್ತದೆ. 21ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗುರುಕಿರಣ್ ತಂಡ ಮತ್ತು 22ರಂದು ಸಂಜೆ ರಾಜೇಶ್ ಕೃಷ್ಣನ್ ಮತ್ತು ಅಲೋಕ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.