ಮಂಡ್ಯ ತಾಲೂಕು ಬೂದನೂರು ಗ್ರಾಮದಲ್ಲಿ ಆಯೋಜಿಸುತ್ತಿರುವ ಉತ್ಸವದ ಲೋಗೋವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಿಡುಗಡೆ ಮಾಡಿದರು.
- ಫೆಬ್ರವರಿ ತಿಂಗಳಲ್ಲಿ ಬೂದನೂರು ಉತ್ಸವ
- ಈ ಬಾರಿ ಹೆಲಿಟೂರಿಸಂ ಮೆರುಗು
- ಶಾಸಕ ರವಿಕುಮಾರ್ ಗಣಿಗ ಪ್ರಯತ್ನ
ಮಂಡ್ಯ: ಹೊಯ್ಸಳರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿರುವ ತಾಲೂಕಿನ ಹೊಸ ಬೂದನೂರಿನಲ್ಲಿ ನೆಲೆಯಾಗಿರುವ ‘ಕಾಶಿ ವಿಶ್ವನಾಥ ಮತ್ತು ಅನಂತಪದ್ಮನಾಭಸ್ವಾಮಿ’ಯ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಉತ್ಸವಕ್ಕೆ ಹೆಲಿಟೂರಿಸಂ ಮೆರಗು ನೀಡಲಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶಾಸಕ ಪಿ.ರವಿಕುಮಾರ್ ಗಣಿಗ ಅವರು ಹೊಸ ಬೂದನೂರು ಗ್ರಾಮದಲ್ಲಿ ಉತ್ಸವ ನಡೆಸುವ ಹೊಸ ಸಂಪ್ರದಾಯಕ್ಕೆ 2024ರಲ್ಲಿ ಚಾಲನೆ ನೀಡಿದ್ದರು. ಅದರಂತೆ ಮೊದಲ ವರ್ಷ ಅಭೂತಪೂರ್ವ ಕಾರ್ಯಕ್ರಮ ಜನಸೂರೆಗೊಂಡಿತ್ತು. ಕಳೆದ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹೊಸ ಬೂದನೂರು ಗ್ರಾಮದ ಸಮೀಪವೇ ನಡೆದ ಹಿನ್ನೆಲೆಯಲ್ಲಿ ಉತ್ಸವ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಫೆ.21 ಮತ್ತು 22ರಂದು ಅದ್ಧೂರಿ ಆಚರಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ.
ಹೊಸಬೂದನೂರು ಗ್ರಾಮದಲ್ಲಿ 13ನೇ ಶತಮಾನದ ಹೊಯ್ಸಳರ ದೊರೆ 2 ನೇ ವೀರಬಲ್ಲಾಳನ ಕಾಲದಲ್ಲಿ ನಿರ್ಮಾಣಗೊಂಡ ಪ್ರಾಚೀನ ಕಾಶಿ ವಿಶ್ವನಾಥ ಮತ್ತು ಅನಂತ ಪದ್ಮನಾಭ ದೇವಾಲಯಗಳಿವೆ. ಇವುಗಳನ್ನು ಕೇಂದ್ರೀಕೃತ ಮಾಡಿಕೊಂಡು ಬೂದನೂರು ಉತ್ಸವ ನಡೆಯುತ್ತಿದೆ. ಈ ಬಾರಿ ಉತ್ಸವದ ಮೆರಗು ಹೆಚ್ಚಿಸಲು ಹೆಲಿಕ್ಯಾಪ್ಟರ್ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಫೆ.20ರಿಂದ 22ರವರೆಗೆ ಹೆಲಿಟೂರಿಸಂ ನಡೆಯಲಿದೆ. ನಿಗದಿತ ಶುಲ್ಕ ಪಾವತಿಸಿ ಹೆಲಿಕ್ಯಾಪ್ಟರ್ ಮುಖಾಂತರ ನಗರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.
ಈ ಸಂಬಂಧ ಶಾಸಕ ರವಿಕುಮಾರ್ ಗಣಿಗ ಅವರ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಆಕರ್ಷಣೀಯ ಹೆಲಿಕಾಪ್ಟರ್ ಹಾರಾಟಕ್ಕೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹೊಸಬೂದನೂರು, ಉಮ್ಮಡಹಳ್ಳಿ, ಶ್ರೀನಿವಾಸಪುರ ಗೇಟ್ ಬಳಿ ಸೂಕ್ತ ಜಾಗ ಗುರುತಿಸಲು ಸ್ಥಳ ಪರಿಶೀಲನೆ ನಡೆಸಲಾಯಿತು. 2024ರಲ್ಲಿ ನಡೆದ ಉತ್ಸವದಲ್ಲಿ ಹಲವು ಕಾರ್ಯಕ್ರಮ ಜನಮೆಚ್ಚುಗೆ ಪಡೆದುಕೊಂಡಿತ್ತು. ಗಂಗಾರತಿ, ರಸಮಂಜರಿ, ಸಾಮೂಹಿಕ ನೃತ್ಯ ಪ್ರದರ್ಶನ, ಮೆರವಣಿಗೆ ಗಮನಸೆಳೆದಿತ್ತು. ಇನ್ನು ಈ ವರ್ಷ ಹೆಲಿಟೂರಿಸಂ ಉತ್ಸವದ ಕಳೆಯನ್ನು ಇನ್ನಷ್ಟು ಹೆಚ್ಚಿಸಲಿದೆ.
ಮೇಳೈಸುತ್ತಿರುವ ಕೆತ್ತನೆ
ಕಾಶಿ ವಿಶ್ವೇಶ್ವರ ದೇವಸ್ಥಾನ ನಕ್ಷತ್ರಾಕಾರದ ಯೋಜಿತ ರಚನೆಯಾಗಿದೆ. ಇದು ಏಕಕೂಟ ದೇವಾಲಯವಾಗಿದ್ದು, ಗರ್ಭಗೃಹ ಮತ್ತು ಸುಕನಾಸಿ, ನವರಂಗ, ಮುಖಮಂಟಪವಿದೆ. ಗೋಡೆ ಮತ್ತು ಒಳಾಂಗಣ ಕಡಿಮೆ ಅಲಂಕಾರಿಕವಾಗಿದ್ದರೂ ಸಾಮಾನ್ಯ ವಾಸ್ತುಶಿಲ್ಪದ ಲಕ್ಷಣವಿದೆ. ಈ ದೇವಸ್ಥಾನವನ್ನು ಹೊಯ್ಸಳ ರಾಜ ನರಸಿಂಹರಾಜರ ಕಾಲದಲ್ಲಿ ಕಟ್ಟಿಸಲಾಗಿದೆ. ಒಳಮಾಳಿಗೆಯ ಕೆತ್ತನೆ ಅಂದವಾಗಿದೆ.
ಇನ್ನು ಅನಂತಪದ್ಮನಾಭ ದೇವಾಲಯ ಜಗುಲಿಯ ಮೇಲೆ ನಿರ್ಮಿಸಲಾದ ಏಕಕೂಟ ದ್ರಾವಿಡ ವಿಮಾನ ರೂಪದಲ್ಲಿದೆ. ಆಯತಾಕಾರದ ಗರ್ಭಗೃಹ, ಸುಕನಾಸಿ, ನವರಂಗ, ಮುಖಮಂಟಪವಿದೆ. ದೇವತೆ ಸಮಭಂಗದಲ್ಲಿ ಪೀಠದ ಮೇಲೆ ನಿಂತಿರುವುದು ಹೊಯ್ಸಳ ಕಲೆಗೆ ಉತ್ತಮ ಉದಾಹರಣೆಯಾಗಿದೆ.
ಈ ಬಾರಿಯ ಹೊಸ ಬೂದನೂರಿನಲ್ಲಿ ನಡೆಯಲಿರುವ ಉತ್ಸವಕ್ಕೆ ಹೆಲಿಟೂರಿಸಂ ಮೆರಗು ನೀಡಲಿದೆ. ಈ ಸಂಬಂಧ ಈಗಾಗಲೇ ಸ್ಥಳ ಪರಿಶೀಲನೆ ಮಾಡಲಾಗಿದೆ. ಜನರಿಗೆ ಇದೊಂದು ವಿಶೇಷ ಅನುಭವ ನೀಡಲಿದೆ.