ಬಾಗೆ ಜೆಎಸ್‌ಎಸ್ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ಕುಮಾರ್ ಮಾತನಾಡಿದರು.
ಸಕಲೇಶಪುರ: ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಕುತೂಹಲ ಮನೋಭಾವ ಸಹಕಾರಿಯಾಗಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಎ. ಎಸ್. ಕಿರಣ್‌ಕುಮಾರ್ ಹೇಳಿದರು.
ತಾಲೂಕಿನ ಬಾಗೆ ಗ್ರಾಮದ ಜೆಎಸ್‌ಎಸ್ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕೂತ್ಸವದಲ್ಲಿ ಮಾತನಾಡಿ, ಯಾವುದೇ ವಸ್ತುಗಳ ಬಗ್ಗೆ ತಿಳಿಯುವ ಅಸೆ ಹೆಚ್ಚಿದ್ದಾಗ ಸಾಧನೆ ಮಾಡಲು ಸಹಕಾರಿಯಾಗಲಿದೆ. ಇದರೊಂದಿಗೆ ವಿನಯ, ಸಂಸ್ಕಾರ ತುಂಬಿಕೊಂಡರೆ ದೇಶದ ಎಲ್ಲಿಯಾದರೂ ಬಧುಕು ನಡೆಸಬಹುದು. ಮಕ್ಕಳ ಶಿಕ್ಷಣದಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ. ಜೆ ಎಸ್‌ಎಸ್‌ನಂತಹ ಖಾಸಗಿ ಸಂಸ್ಥೆಗಳು ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡುತ್ತಿವೆ ಎಂದು ಬಣ್ಣಿಸಿದರು.
ಉಪಗ್ರಹಗಳ ಮೂಲಕ ಚಂಡಮಾರುತಗಳು ಯಾವಾಗ ಬರುತ್ತವೆ ಎಂಬುದನ್ನು ಗುರುತಿಸಬಹುದು ಮತ್ತು ಮೀನುಗಳ ಆಹಾರ ಸರಪಳಿಯನ್ನು ಗಮನಿಸಬಹುದು. ಉಪಗ್ರಹ ತಂತ್ರಜ್ಞಾನ ಬಹಳವಾಗಿ ಅಭಿವೃದ್ಧಿಯಾಗಿದ್ದು, ಭಾರತವು ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯುತ್ತಿದೆ. 1973ರಲ್ಲಿ ಅಮೆರಿಕದ ಉಪಗ್ರಹ ತಂತ್ರಜ್ಞಾನವನ್ನು ಭಾರತ ಅಳವಡಿಸಿಕೊಂಡಿತ್ತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ನಿರ್ದೇಶಕ ಕೆ.ಆರ್.ಸಂತಾನಂ ಮಾತನಾಡಿ, ಮಕ್ಕಳು ಕಲಿಕೆಗೆ ತಕ್ಕಂತೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಜೆಎಸ್‌ಎಸ್ ಸಂಸ್ಥೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಒತ್ತು ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಶಾಲೆಯ ಪ್ರಾಂಶುಪಾಲರಾದ ಮಧುಕುಮಾರ್, ಶಿವಪ್ರಸಾದ್ ಉಪಪ್ರಾಂಶುಪಾಲ ಯೋಗೇಶ್ ಇತರರಿದ್ದರು.