ಮದ್ದೂರು ಪಟ್ಟಣದ ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮದ ವೇಳೆ ಸಂಸ್ಥೆಯ ಅಧ್ಯಕ್ಷ ಶಿವನಂಜಯ್ಯ ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಚಂದ್ರನಾಯಕ್, ಸಂತೋಷ್‌ಗೌಡ, ಬಿ.ಸಿ.ಸರ್ವಮಂಗಳಾ, ಎ.ವಿ.ಪಾವನಾ ಇದ್ದರು.
- ಶಾಲೆ ಆವರಣದಲ್ಲಿ ರಾಶಿ, ಗೋಪೂಜೆ, ಎಳ್ಳುಬೆಲ್ಲ ವಿನಿಮಯ
ಮದ್ದೂರು: ಸುಗ್ಗಿ ಹಬ್ಬ, ಮಕರ ಸಂಕ್ರಾಂತಿ ಸಂಬಂಧ ಆಯೋಜಿಸಿದ್ದ ರಾಶಿ ಪೂಜೆ, ಗೋಪೂಜೆ, ಎಳ್ಳುಬೆಲ್ಲ ವಿನಿಮಯ, ರಂಗೋಲಿ ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳ ನಡುವೆ ಪಟ್ಟಣದ ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಮಕ್ಕಳು ಬುಧವಾರ ದಿನವಿಡೀ ಮಿಂದೆದ್ದರು.
ಶಾಲಾ ಆವರಣದಲ್ಲಿ ಬುಧವಾರ ಬೆಳಗ್ಗೆ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಸಿಂಗರಿಸಿದ್ದ ಭತ್ತದ ರಾಶಿ, ಗೋವುಗಳಿಗೆ ಮಕ್ಕಳು ಮತ್ತು ಶಿಕ್ಷಕರು ಸಾಮೂಹಿಕ ಪೂಜೆ ಸಲ್ಲಿಸುವ ಜತೆಗೆ ಎಳ್ಳುಬೆಲ್ಲ ವಿನಿಮಯ ಮಾಡಿಕೊಂಡರು.
ಗೋಪೂಜೆ ಬಳಿಕ ಗೋವುಗಳಿಗೆ ಗೋಗ್ರಾಸ ನೀಡುವ ಮೂಲಕ ರೈತರ ಹಬ್ಬ ಸುಗ್ಗಿ ಸಂಭ್ರಮದ ಸಂಕ್ರಾಂತಿಯ ಮಹತ್ವ ಮತ್ತು ಆಚರಣೆ ಕುರಿತಾಗಿ ಹಾಜರಿದ್ದ ಮಕ್ಕಳಿಗೆ ತಿಳಿಸಲಾಯಿತು. ನಿತ್ಯ ತರಗತಿಗಳಲ್ಲಿ ಬೋಧನೆಗೆ ಮುಂದಾಗುವ ಸಿಬ್ಬಂದಿ ಸಂಕ್ರಾಂತಿ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಬಗೆಯ ವಿಶಿಷ್ಟ ರೀತಿಯ ರಂಗೋಲಿಗಳನ್ನು ಬಿಡಿಸಿದ್ದರು.
ಸಂಕ್ರಾಂತಿ ಸುಗ್ಗಿ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಶಿವನಂಜಯ್ಯ, ಪ್ರಸ್ತುತ ದಿನಗಳಲ್ಲಿ ಹಳ್ಳಿಗಾಡಿನಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು ಪೂರ್ವಿಕರು ನಡೆಸಿಕೊಂಡು ಬಂದ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಹೇಳಿದರು.
ಸಂಸ್ಥೆ ಉಪಾಧ್ಯಕ್ಷ ಚಂದ್ರನಾಯಕ್, ಸಿಇಒ ಸಂತೋಷ್‌ಗೌಡ, ನಿರ್ದೇಶಕಿ ಬಿ.ಸಿ.ಸರ್ವಮಂಗಳಾ, ಮುಖ್ಯ ಶಿಕ್ಷಕಿ ಎ.ವಿ. ಪಾವನಾ, ಶಿಕ್ಷಕರಾದ ವಿ.ಟಿ.ಮೀನಾ, ಜ್ಯೋತಿ, ಕಾಂಚನಾ, ಸುನಂದಾ, ಸುಮಯ್ಯ, ಶ್ರುತಿ, ಸಾನಿಯಾ, ಮಾಹಿನ್, ಪ್ರಿಯಾಂಕಾ, ದೀಪಿಕಾ, ಶಿಲ್ಪಾ, ಸಿಂಧು, ದುರ್ಗೇಶ್, ಸಾದಿಯಾ ಇತರರಿದ್ದರು.