ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ದೆಯಾದ ಹಿನ್ನೆಲೆಯಲ್ಲಿ ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲ್ನಾಜ್ ಭಾನು ಮತ್ತು ಪಿಡಿಒ ಕೆ.ಚೆಂದಿಲ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶಸ್ತಿ ವಿತರಿಸಿದರು. 
ಮಂಡ್ಯ

ಹಲಗೂರು ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಹಲಗೂರು: ಗ್ರಾಮೀಣ ಜನರ ಬೇಡಿಕೆಗಳಿಗೆ ಅನುಗುಣವಾಗಿ ಮೂಲಸೌಕರ್ಯ ಮತ್ತು ಉತ್ತಮ ಸೇವೆ ನೀಡುವ ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಹಲಗೂರು ಗ್ರಾಮ ಪಂಚಾಯಿತಿ ಪಾತ್ರವಾಗಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲ್ನಾಜ್ ಭಾನು ಮತ್ತು ಪಿಡಿಒ ಕೆ.ಚೆಂದಿಲ್ ಪುರಸ್ಕಾರ ಸ್ವೀಕರಿಸಿದರು.
ಉತ್ತಮವಾಗಿ ಆಡಳಿತ ನಡೆಸುತ್ತಿರುವ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು ಪ್ರತಿ ತಾಲೂಕಿಗೆ ಒಂದು ಪಂಚಾಯಿತಿಯನ್ನು ಆಯ್ಕೆ ಮಾಡಿ ಪ್ರತಿ ವರ್ಷವೂ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆ ಮಾಡಲು ಗ್ರಾಮ ಪಂಚಾಯಿತಿಗಳು ಕಾಯ್ದೆ ಬದ್ಧವಾಗಿ ನಿರ್ವಹಿಸಬೇಕಾದ ಹಾಗೂ ಸ್ವಯಂಪ್ರೇರಣೆಯಿಂದ ಕೈಗೊಳ್ಳುವ ಅಭಿವೃದ್ಧಿ ಚಟುವಟಿಕೆಗಳು, ಸರ್ಕಾರ ಕಾಲ ಕಾಲಕ್ಕೆ ರೂಪಿಸಿದ ಕಾರ್ಯಕ್ರಮಗಳ ನಿರ್ವಹಣೆಗೆ ಕೈಗೊಂಡ ಕ್ರಮಗಳು ಒಳಗೊಂಡಂತೆ ಮಾನದಂಡ ಅನುಸರಿಸಲಾಗುತ್ತದೆ. ಪ್ರಶಸ್ತಿಯಲ್ಲಿ ಪ್ರಮಾಣಪತ್ರ, ಸ್ಮರಣಿಕೆ, ಮತ್ತು 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಿ ಗೌರವಿಸಲಾಗಿದೆ.