ಹಲಗೂರು ಗ್ರಾಮ ದೇವತೆ ಪಟ್ಟಲದಮ್ಮನ ದೇವರು. 
ಮಂಡ್ಯ

ಇಂದಿನಿಂದ ಶ್ರೀ ಪಟ್ಟಲದಮ್ಮನ ಜಾತ್ರಾ ಮಹೋತ್ಸವ

ಹಲಗೂರು: ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಗಳ ಗ್ರಾಮ ದೇವತೆ ಶ್ರೀ ಪಟ್ಟಲದಮ್ಮನ ಜಾತ್ರಾ ಮಹೋತ್ಸವ ಏ.8ರಿಂದ 12ರವೆಗೆ ನಡೆಯಲಿದೆ.
ಬುಧವಾರ ಸಂಜೆ ಅರ್ಚಕರ ಮನೆಯಿಂದ ಪ್ರಸಾದ ತೆಗೆದುಕೊಂಡು ದೇವಸ್ಥಾನಕ್ಕೆ ಬಂದು ಪೂಜೆ-ಪುನಸ್ಕಾರಗಳು ನಡೆದ ನಂತರ ಗ್ರಾಮಸ್ಥರು ಕೊಂಡದ ಬಾಯಿಯನ್ನು ತೆಗೆಯುತ್ತಾರೆ. ಆಗ ಅರ್ಚಕರು ಪ್ರಸಾದವನ್ನು ಕೊಂಡಕ್ಕೆ ನೈವೇದ್ಯ ಮಾಡಿ ಮಹಾ ಮಂಗಳಾರತಿ ನಡೆಸಿ ಭಕ್ತರಿಗೆ ಹಂಚುತ್ತಾರೆ. ಗುರುವಾರ ಎಂದಿನಂತೆ ಧಾರ್ಮಿಕ ವಿಧಾನಗಳು ನಡೆಯುತ್ತವೆ.
ಶುಕ್ರವಾರ ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಹೋಮ-ಹವನ ನಡೆಸಿ ದೇವರಿಗೆ ಅಭಿಷೇಕ, ಅಲಂಕಾರ, ನೈವೇದ್ಯ ಮಾಡಿ 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಆ ದಿನ ಹರಕೆ ಹೊತ್ತ ಮುತ್ತೈದೆಯರು ಹೆಸರು ಬೇಳೆ ಕೋಸಂಬರಿ, ಪಾನಕ ಮಾಡಿಕೊಂಡು ಮುತ್ತೈದೆಯರಿಗೆ ಅರಿಶಿಣ, ಕುಂಕುಮ ನೀಡಿ ವಿನಿಮಯ ಮಾಡುತ್ತಾರೆ.
ಅದೇ ದಿನ ಸಂಜೆ ಕರಿ ಬೀದಿಯಲ್ಲಿರುವ ಕರಗದ ಮನೆಯಿಂದ ಓಲೆ ಬಂಡಿ ಎಳವಾರವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೊರಟಾಗ ಜತೆಯಲ್ಲಿ ಹರಕೆ ಹೊತ್ತವರು ಎತ್ತಿನಗಾಡಿಯಲ್ಲಿ ಪಾನಕ, ಮಜ್ಜಿಗೆ ಮಾಡಿಕೊಂಡು ಭಕ್ತರಿಗೆ ಹಂಚುತ್ತಾ ದೇವಸ್ಥಾನದ ಹತ್ತಿರ ಬರುತ್ತಾರೆ. ಸಂಜೆ ಪೂಜೆಯ ನಂತರ ಕೊಂಡಕ್ಕೆ ಸೌದೆಗಳನ್ನು ಜೋಡಿಸಲಾಗುತ್ತದೆ. ಅದೇ ದಿನ ರಾತ್ರಿ ಸಿದ್ದಪ್ಪಾಜಿ ದೇವಸ್ಥಾನದ ಅರ್ಚಕರು, ನಡುಕೇರಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರು ಹಾಗೂ ಪಟ್ಟಲದಮ್ಮ ದೇವಸ್ಥಾನದ ಅರ್ಚಕರು ಸೇರಿ ಕೊಂಡಕ್ಕೆ ಪೂಜೆ ಸಲ್ಲಿಸಿ ಬೆಂಕಿ ಹಚ್ಚುತ್ತಾರೆ.
ಶನಿವಾರ ಬೆಳಗಿನ ಜಾವ 3 ಗಂಟೆಗೆ ನಡು ಕೇರಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ದೇವರ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಹೂವು, ಹೊಂಬಾಳೆ ಮಾಡಿಕೊಂಡು ದೇವರ ಗಿಂಡಿಯನ್ನು ಪೂಜೆ ಮಾಡಿಸಿ ಆರ್ಚಕರು ಹೊತ್ತು ಹೊರಟಾಗ ಜತೆಯಲ್ಲಿ ಮುತ್ತೈದೆಯರು ತಂಬಿಟ್ಟಿನ ಆರತಿ ಹಿಡಿದು ಬಸಪ್ಪ ದೇವರ ಜೊತೆ ಪಟ್ಟಲದಮ್ಮ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಬರುತ್ತಾರೆ. ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಣೆ ಹಾಕಿ, ದೇವಸ್ಥಾನದಲ್ಲಿ ಪೂಜೆ ನಡೆದ ನಂತರ ಅರ್ಚಕರು ದೇವರ ಗಿಂಡಿಯನ್ನು ಹೊತ್ತುಕೊಂಡು ಕೊಂಡವನ್ನು ಹಾಯುತ್ತಾರೆ.
ಭಾನುವಾರ ಕರಗದ ಮನೆ ಹತ್ತಿರ ಪೂಜೆ ಸಲ್ಲಿಸಿ ಮುತ್ತೈದೆಯರು ದೇವರಿಗೆ ಸೋಗಿಲು ಹಾಕಿ ಮಡಿಲು ತುಂಬುತ್ತಾರೆ. ವಳಗೆರೆ ದೊಡ್ಡಿ ಗ್ರಾಮಸ್ಥರು ಬಂದು ಪೂಜೆ ಸಲ್ಲಿಸಿ ದೇವರ ಕರಗವನ್ನು ತೆಗೆದುಕೊಂಡು ಹೋಗಿ ವಳಗೆರೆ ದೊಡ್ಡಿ ಗ್ರಾಮದಲ್ಲಿ ಮೆರವಣಿಗೆ ನಡೆಸುತ್ತಾರೆ. ಅಲ್ಲಿನ ಗ್ರಾಮಸ್ಥರು ಪೂಜೆ ಸಲ್ಲಿಸಿ ಅಲ್ಲಿಯೂ ಮುತ್ತೈದೆಯರು ಸೋಗಿಲು ಹಾಕಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವಂತೆ ಪೂಜೆ ಸಲ್ಲಿಸುತ್ತಾರೆ.
ಗ್ರಾಮ ದೇವತೆ ಹಬ್ಬವನ್ನು ಎಲ್ಲ ವರ್ಗದವರು ಸೇರಿ ಭಕ್ತಿಯಿಂದ ಆಚರಿಸುತ್ತಾರೆ. ಭಕ್ತರ ಹರಕೆಯನ್ನು ಹಾಗೂ ಅವರ ಇಷ್ಟಾರ್ಥವನ್ನು ನೆರವೇರಿಸುವ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಗ್ರಾಮದಿಂದ ಹೋಗಿ ಪಟ್ಟಣ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಈ ಹಬ್ಬಕ್ಕೆ ತಪ್ಪದೆ ಬಂದು ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ ಎಂದು ಅರ್ಚಕ ಕೃಷ್ಣಪ್ಪ ತಿಳಿಸಿದರು.