ಹಲಗೂರಿನ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಉದ್ಘಾಟಿಸಿದರು. ಶಿಕ್ಷಣ ಇಲಾಖೆಯ ನಿರ್ದೇಶಕ ಎನ್.ಎಂ.ಪುಟ್ಟಸ್ವಾಮಿ, ಮುಖ್ಯಶಿಕ್ಷಕ ಕುಳ್ಳೇಗೌಡ ಮತ್ತಿತರರಿದ್ದರು. 
ಮಂಡ್ಯ

ಶಿಕ್ಷಣ, ಕ್ರೀಡೆಯಲ್ಲಿ ಸಾಧನೆಗೈದು ಕೀರ್ತಿ ತನ್ನಿ

ಹಲಗೂರು: ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನುರಿತ ಶಿಕ್ಷಕರಿಂದ ಉತ್ತಮ ಶಿಕ್ಷಣ ನೀಡುತ್ತಿದ್ದು, ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ಉತ್ತಮ ಫಲಿತಾಂಶದ ಜತೆಗೆ ಕ್ರೀಡೆಯಲ್ಲೂ ಸಾಧನೆ ಮಾಡಿ ರಾಜ್ಯ ಹಾಗೂ ತಾಲೂಕಿಗೆ ಕೀರ್ತಿ ತರುವಂತೆ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಸಲಹೆ ನೀಡಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಹಲಗೂರು ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2025-26 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಲು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಮಕ್ಕಳಲ್ಲಿ ಸಾಹಿತ್ಯ, ಕಲೆ, ಸಂಗೀತದ ಜ್ಞಾನ ಹೆಚ್ಚಿಸಲು ಹಾಗೂ ಅವರಲ್ಲಿರುವ ಸಪ್ತ ಪ್ರತಿಭೆಯನ್ನು ಹೊರ ತರಲು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಅತ್ಯವಶ್ಯಕ ಎಂದರು.
ಡಿಸೆಂಬರ್‌ನಲ್ಲಿ ಒಂದರಿಂದ ಐದನೇ ತರಗತಿ ಮಕ್ಕಳಿಗೆ ಕಲಿಕಾ ಹಬ್ಬ ಕಾರ್ಯಕ್ರಮವಿದೆ. ಮಕ್ಕಳು ಕಥೆ ಹೇಳುವುದು, ಗಟ್ಟಿಯಾಗಿ ಪಾಠ ಓದುವುದು, ಬರೆಯುವ ಕಾರ್ಯಕ್ರಮ ಇದಾಗಿದೆ. ಒಂದರಿಂದ ಐದನೇ ತರಗತಿವರೆಗೆ ಮಾತ್ರ ಮಾಡಿದ್ದಾರೆ. ಇನ್ನು ಮುಂದೆ ಪ್ರೌಢಶಾಲಾ ಮಟ್ಟಕ್ಕೂ ವಿಸ್ತರಿಸುವಂತೆ ಇಲಾಖೆ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ನಿರ್ದೇಶಕ ಎನ್.ಎಂ.ಪುಟ್ಟಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸರ್ಕಾರ ಪ್ರಥಮ ದರ್ಜೆ ಕಾಲೇಜಿನ ಮುಖ್ಯಶಿಕ್ಷಕ ಕುಳ್ಳೇಗೌಡ, ಶಿಕ್ಷಕರಾದ ದಯಾನಂದ, ಸಿದ್ದರಾಜು, ಪುಟ್ಟರಾಜು, ಜಿ.ಎಸ್.ಕೃಷ್ಣ ಮತ್ತಿತರರು ಹಾಜರಿದ್ದರು.