ಹಲಗೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಣ್ಣಿನ ತಪಾಸಣೆ ಶಿಬಿರದಲ್ಲಿ ರೋಗಿಗಳ ಪರೀಕ್ಷೆ ನಡೆಸುತ್ತಿರುವ ತಜ್ಞರು.  
ಮಂಡ್ಯ

ಹಲಗೂರಿನಲ್ಲಿ ನೇತ್ರ ತಪಾಸಣಾ ಉಚಿತ ಶಿಬಿರ

ಹಲಗೂರು: ಎಲ್ಲ ಅಂಗಗಳಿಗಿಂತಲೂ ಪ್ರಧಾನವಾದ ಕಣ್ಣಿನ ಆರೋಗ್ಯ ಪಾಲನೆ ಬಹು ಮುಖ್ಯ ಎಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಶೇಖರ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶಾರದಾ ಕಣ್ಣಿನ ಆಸ್ಪತ್ರೆ ಹಮ್ಮಿಕೊಂಡಿದ್ದ ಕಣ್ಣಿನ ತಪಾಸಣೆ ಉಚಿತ ಶಿಬಿರಕ್ಕೆ ಮಂಗಳವಾರ
ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ತಿಂಗಳ ಮೊದಲನೇ ಮಂಗಳವಾರ ನಮ್ಮ ಆಸ್ಪತ್ರೆಯಲ್ಲಿ ಶಾರದಾ ಕಣ್ಣಿನ ಮತ್ತು ದಂತ ಆಸ್ಪತ್ರೆಯ ವತಿಯಿಂದ ಉಚಿತ ತಪಾಸಣಾ ಶಿಬಿರವನ್ನು ನಡೆಸಲಾಗುತ್ತದೆ. ಗ್ರಾಮೀಣ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಣ್ಣಿನ ಪೊರೆ ತಪಾಸಣೆ ಮಾಡಿ ಶಸ್ತ್ರ ್ರಚಿಕಿತ್ಸೆ ಅವಶ್ಯಕತೆ ಇರುವವರನ್ನು ಬೆಂಗಳೂರಿನ
ಶಾರದಾ ಕಣ್ಣಿನ ಆಸ್ಪತ್ರೆಗೆ ಕರೆದೊಯ್ದು ಮರುದಿನ ಶಸ್ತ್ರಚಿಕಿತ್ಸೆ ನಡೆಸಿ ನಂತರ ಮನೆಗೆ ಕಳಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇವೆಲ್ಲವೂ ಸಂಪೂರ್ಣ ಉಚಿತ ಸೇವೆಯಾಗಿದ್ದು, ಈವರೆಗೆ ಚಿಕಿತ್ಸೆ ಪಡೆದವರು ದೃಷ್ಟಿ ಪಡೆದಿದ್ದಾರೆ. ಅಗತ್ಯ ಇದ್ದವರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶಿಬಿರದಲ್ಲಿ 25 ಜನರಿಗೆ ತಪಾಸಣೆ ನಡೆಸಲಾಯಿತು. 8 ಜನರಿಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರುವುದರಿಂದ ಅವರನ್ನು ಬೆಂಗಳೂರಿನ ಶಾರದಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಶಿಬಿರ ಸಂಯೋಜಕರಾದ ಮಹದೇವಪ್ಪ ಇತರರು ಇದ್ದರು.