ಮಂಡ್ಯದಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವವನ್ನು ಬೇಬಿಬೆಟ್ಟದ ರಾಮಯೋಗಿಶ್ವರ ಮಠದ ಶಿವಬಸವ ಸ್ವಾಮೀಜಿ ಉದ್ಘಾಟಿಸಿದರು.
- ನಗರದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ
- ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆ
ಶಿವಶರಣ ಹಡಪದ ಅಪ್ಪಣ್ಣ ಅವರ ತತ್ವಾದರ್ಶ ಸಮಾನತೆಯ ಸಮಾಜ ನಿರ್ಮಾಣಕ್ಕೆ ದಾರಿದೀಪ ಎಂದು ಬೇಬಿಬೆಟ್ಟದ ರಾಮಯೋಗಿಶ್ವರ ಮಠದ ಶಿವಬಸವ ಸ್ವಾಮೀಜಿ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರವಚನದಲ್ಲಿ ’ಅಡಪ’ ಎಂದರೆ ಶೋಧನೆ ಮಾಡುವ ವಸ್ತುಗಳನ್ನು ಅಥವಾ ತಾಂಬೂಲ ಮುಂತಾದ ಸಾಮಗ್ರಿಗಳನ್ನು ಇಟ್ಟುಕೊಳ್ಳುವ ಚೀಲ ಎಂಬ ಅರ್ಥವಿದೆ. 12ನೇ ಶತಮಾನದ ಅನುಭವ ಮಂಟಪದಲ್ಲಿ ಲಕ್ಷಕ್ಕೂ ಹೆಚ್ಚು ಗಣಂಗಳು ಇದ್ದರೂ, ನಿಜಶರಣ ಅಥವಾ ನಿಜಮುಕ್ತಿ ಎಂದು ನೆನೆಸಿಕೊಂಡ ತಕ್ಷಣ ನೆನಪಿಗೆ ಬರುವುದು ಹಡಪದ ಅಪ್ಪಣ್ಣ ಮತ್ತು ಅವರ ಧರ್ಮಪತ್ನಿ ಲಿಂಗಮ್ಮ. ಅಂದು ಕಲ್ಯಾಣದಲ್ಲಿ ಮೇಲ್ವರ್ಗದವರು ಮತ್ತು ಕೆಳವರ್ಗದವರೆಂಬ ತಾರತಮ್ಯವಿಲ್ಲದೆ, ಇವ ನಮ್ಮವ ಎಂಬ ಭಾವನೆಯೊಂದಿಗೆ ಎಲ್ಲರನ್ನೂ ಒಂದಾಗಿ ಸ್ವೀಕರಿಸಲಾಯಿತು. ಅಂತಹ ಸಂದರ್ಭದಲ್ಲಿ ಹಡಪದ ಅಪ್ಪಣ್ಣನವರು ಬಸವಣ್ಣನವರ ಪರಮ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು ಎಂದರು.
ಬಸವಣ್ಣನವರ ಬಳಿಗೆ ನೇರವಾಗಿ ಹೋಗಲು ಸಾಧ್ಯವಾಗದಿದ್ದಾಗ ಜನರು ಅಪ್ಪಣ್ಣನವರ ಮೂಲಕ ತಲುಪುತ್ತಿದ್ದರು. ಅಪ್ಪಣ್ಣ ಹಾಗೂ ಅವರ ಪತ್ನಿ ಲಿಂಗಮ್ಮನವರು ತಮ್ಮ ಕಾಯಕ ಮತ್ತು ಭಕ್ತಿಯಿಂದ ಶಿವನಿಗೆ ಹತ್ತಿರವಾದವರು. ಇಂದಿನ ಕಾಲದಲ್ಲಿ ದಾಂಪತ್ಯ ಜೀವನದಲ್ಲಿ ಅನೇಕ ಸವಾಲುಗಳಿರುವಾಗ, ಅಂದು ಗಂಡ-ಹೆಂಡತಿ ಒಂದೇ ಹಾದಿಯಲ್ಲಿ ನಡೆದು ಕಾಯಕದ ಮಹತ್ವವನ್ನು ಎತ್ತಿಹಿಡಿದರು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಪಿಇಎಸ್ ಕಾಲೇಜಿನ ಉಪನ್ಯಾಸಕಿ ಡಾ.ಅನಿತಾ, 12ನೇ ಶತಮಾನದ ಕಲ್ಯಾಣ ಕ್ರಾಂತಿಯು ಬಸವಣ್ಣನವರ ದೂರದೃಷ್ಟಿ ಮತ್ತು ಸಾರ್ವಕಾಲಿಕ ಯೋಚನೆಗಳ ಫಲ. ಹೆಣ್ಣುಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತವಾಗದೆ, ಸಮಾಜಕ್ಕೆ ಸೇವೆ ಸಲ್ಲಿಸಬಲ್ಲರು ಎಂಬುದನ್ನು ಅಕ್ಕಮಹಾದೇವಿ ಸೇರಿದಂತೆ ಅನೇಕ ಶರಣೆಯರು ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ ಸಾಬೀತುಪಡಿಸಿದರು. ಶಿವಶರಣರು ಅನುಭವ ಮಂಟಪದಲ್ಲಿ ಮಾನವೀಯ ಸಮಾಜ ಕಟ್ಟುವ ಕುರಿತು ನಿರಂತರ ಚರ್ಚೆ ನಡೆಸಿ, ತಮ್ಮ ನೋವು-ನಲಿವುಗಳನ್ನು ’ವಚನಗಳ’ ಮೂಲಕ ಸಮಾಜದ ಮ್ಯಾನಿಫೆಸ್ಟೋಗಳನ್ನಾಗಿ ಪರಿವರ್ತಿಸಿದರು. 1970ರ ದಶಕದಲ್ಲಿ ನಡೆದ ರೈತ, ದಲಿತ, ಮಹಿಳಾ ಹಾಗೂ ಬಂಡಾಯ ಚಳವಳಿಗಳು ಸೇರಿದಂತೆ ಎಲ್ಲಾ ಸಾಮಾಜಿಕ ಹೋರಾಟಗಳಿಗೆ 12ನೇ ಶತಮಾನದ ವಚನ ಚಳವಳಿಯೇ ಮೂಲ ಮಾದರಿಯಾಗಿದೆ ಎಂದರು.
ಸವಿತಾ ಸಮಾಜದ ಮುಖಂಡ ವೇಣುಗೋಪಾಲ್ ಮತ್ತು ಡಿ.ದೇವರಾಜು ಅರಸು ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರವಿದ್ದ ಮೆರವಣಿಗೆ ಡಿಸಿ ಕಚೇರಿ ಎದುರು ಚಾಲನೆ ನೀಡಲಾಯಿತು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಇತರರಿದ್ದರು.