ಮಳವಳ್ಳಿ ತಾಲೂಕಿನ ಡಿ.ಹಲಸಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುಂವದನಾ ಕಾರ್ಯಕ್ರಮದಲ್ಲಿ ನಿಧನರಾಗಿದ್ದ ಶಾಲೆಯ ನಿವೃತ್ತ ಶಿಕ್ಷಕ ಬಸವರಾಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. 
ಮಂಡ್ಯ

ಅನಾದಿ ಕಾಲದಿಂದಲೂ ಗುರುಗಳನ್ನು ಗೌರವಿಸಲಾಗುತ್ತಿದೆ

ಶ್ರೀಬಸವೇಶ್ವರ ಪ್ರೌಢಶಾಲೆಯ ಶಿಕ್ಷಕ ರಾಮಲಿಂಗಯ್ಯ ಹೇಳಿಕೆ

ಮಳವಳ್ಳಿ: ಶಿಕ್ಷಣ ಕಲಿಸಿದ ಶಿಕ್ಷಕರನ್ನು ನೆನೆದು ಹಳೆಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಶಿಕ್ಷಕರ ವೃತ್ತಿ ಜೀವನಕ್ಕೆ ಸಿಗುವ ಗೌರವದ ಸಾರ್ಥಕತೆ ಎಂದು ತಾಲೂಕಿನ ಡಿ.ಹಲಸಹಳ್ಳಿ ಗ್ರಾಮದ ಶ್ರೀಬಸವೇಶ್ವರ ಪ್ರೌಢಶಾಲೆಯ ಶಿಕ್ಷಕ ರಾಮಲಿಂಗಯ್ಯ ಹೇಳಿದರು.
ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ 2009ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಒಗ್ಗೂಡಿ ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರು ಎಂಬ ಪದಕ್ಕೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಪೂಜ್ಯಭಾವನೆಯಿಂದ ನಾವುಗಳು ಗೌರವಿಸಿಕೊಂಡು ಬಂದಿದ್ದೇವೆ. ಅಂದಿನ ಗುರುಕುಲದ ಶಿಕ್ಷಣದಲ್ಲಿ ಗುರು-ಹಿರಿಯರಿಗೆ ಗೌರವಿಸುವುದರ ಬಗ್ಗೆ ಮಕ್ಕಳಿಗೆ ಮೊದಲ ಆದ್ಯತೆ ನೀಡುವುದರ ಶಿಕ್ಷಣವನ್ನು ನೀಡಲಾಗುತ್ತಿತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಶಿವಮೂರ್ತಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವದ ಬದುಕನ್ನು ರೂಪುಗೊಳ್ಳಲು ಕಾರಣೀಭೂತರಾದ ನಮಗೆ ಅಕ್ಷರ ಜ್ಞಾನ ನೀಡಿದ ಗುರುಗಳನ್ನು ಆಹ್ವಾನಿಸಿ ಗುರುವಂದನೆ ಸಲ್ಲಿಸುತ್ತಿರುವುದು ಗುರು-ಶಿಷ್ಯ ಪರಂಪರೆಯ ಗೌರವವನ್ನು ಹೆಚ್ಚಿಸಿದೆ ಎಂದು ಶ್ಲಾಘಿಸಿದರು.
ನಿಧನರಾಗಿದ್ದ ಶಾಲೆಯ ನಿವೃತ್ತ ಶಿಕ್ಷಕ ಬಸವರಾಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಿರಿಯ ವಿದ್ಯಾರ್ಥಿಗಳು ತಮಗೆ ಶಿಕ್ಷಣ ಕಲಿಸಿದ ನಿವೃತ್ತ ಶಿಕ್ಷಕ ಶಿವಮೂರ್ತಿ, ಶಾಲೆಯ ಶಿಕ್ಷಕರಾದ ಮನೋಹರ್. ವೃಷಬೇಂದ್ರಪ್ರಸಾದ್, ಮೋಕ್ಷಮಹದೇವ ಪ್ರಸಾದ್, ರಾಮಲಿಂಗಯ್ಯ, ಶಿವನಂಜಮಣಿ, ಪ್ರಸನ್ನ, ರಾಜಶೇಖರ್, ಜಯರಾಮ್ ಅವರನ್ನು ಅಭಿನಂದಿಸಿ ಗುರುವಂದನೆ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿಗಳು ಸಮಾಗಮದ ವೇಳೆ ತಮ್ಮ ವ್ಯಾಸಂಗದ ದಿನಗಳನ್ನು ಮೆಲುಕು ಹಾಕುತ್ತಾ ಸಂಭ್ರಮಿಸಿದರು. ಮುಖ್ಯಶಿಕ್ಷಕಿ ಶೈಲಜಾ, ಆಯೋಜಕ ಹಿರಿಯ ವಿದ್ಯಾರ್ಥಿಗಳಾದ ಮಹೇಶ್‌ಕುಮಾರ್, ಕೆ.ಚಂದ್ರು, ನಂದನ್, ಸಿದ್ದೇಗೌಡ, ಭವ್ಯಾ, ನಿರುಪಮಾ, ಉಮೇಶ್, ಮನು, ಆಕಾಶ್, ಮಹದೇವಸ್ವಾಮಿ ಸೇರಿದಂತೆ ನೂರಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.