ಮಂಡ್ಯದ ಶಂಕರನಗರದಲ್ಲಿರುವ ಗೀತಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ಕೆ.ಎಸ್.ಮಾದೇಗೌಡ ಅವರನ್ನು ಸನ್ಮಾನಿಸಲಾಯಿತು.
- ಶಂಕರನಗರದಲ್ಲಿರುವ ಗೀತಾ ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆ
- ಹಳೆಯ ವಿದ್ಯಾರ್ಥಿಗಳಿಂದ ಆಯೋಜನೆ
ಮಂಡ್ಯ: ಒಬ್ಬ ಗುರುವಿಗೆ ತಮ್ಮ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿ ಸಮಾಜದಲ್ಲಿ ಉತ್ತಮ ಹೆಸರು ಗಳಿಸುವುದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ. ವಿದ್ಯಾರ್ಥಿಗಳು ಸಾಧನೆ ಮಾಡಿದಾಗ, ಅವರು ನಮ್ಮ ಶಾಲೆಯ ಮಕ್ಕಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸೌಭಾಗ್ಯ ನಮ್ಮದಾಗುತ್ತದೆ ಎಂದು ಶಂಕರನಗರದ ಗೀತಾ ಪ್ರೌಢಶಾಲೆಯ ಆಡಳಿತಾಧಿಕಾರಿ ಹಾಗೂ ಹಿರಿಯ ಶಿಕ್ಷಕ ಕೆ.ಎಸ್.ಮಾದೇಗೌಡ ಹರ್ಷ ವ್ಯಕ್ತಪಡಿಸಿದರು.
ಗುರುಪೂರ್ಣಿಮೆ ಅಂಗವಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮತ್ತು ಮಾಜಿ ನಿರ್ದೇಶಕ ಎಂ.ಕೃಷ್ಣ ಅವರ ನೇತೃತ್ವದಲ್ಲಿ ಇಲ್ಲಿನ ಶಂಕರನಗರದಲ್ಲಿರುವ ಗೀತಾ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ’ಗುರುವಂದನಾ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಡತನದಿಂದ ಯಾವ ಸಾಧನೆಗೂ ಅಡ್ಡಿಯಾಗುವುದಿಲ್ಲ, ಆದರೆ ವಿದ್ಯೆ ಮಾತ್ರ ಮನುಷ್ಯನನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಬಲ್ಲದು. ನಾನು 1974ರಿಂದ ಇದೇ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇನೆ. ಅವರೆಲ್ಲರೂ ಇಂದು ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಹುದ್ದೆಗಳಲ್ಲಿದ್ದಾರೆ. ಬಿ.ಪಿ.ಪ್ರಕಾಶ್ ಮತ್ತು ಎಂ. ಕೃಷ್ಣ ಅವರು ಇಂದು ಉನ್ನತ ಸ್ಥಾನಕ್ಕೇರಿದ್ದರೂ, ಗುರುಗಳನ್ನು ಮರೆಯದೆ ಗೌರವಿಸಿರುವುದು ಅವರ ಸಂಸ್ಕಾರವನ್ನು ತೋರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ನಾವು ಇಂದು ಸಮಾಜದಲ್ಲಿ ಗುರುತಿಸಿಕೊಂಡಿದ್ದೇವೆ ಎಂದರೆ, ಅದಕ್ಕೆ ನಮ್ಮ ಗುರುಗಳು ನೀಡಿದ ಮಾರ್ಗದರ್ಶನ ಮತ್ತು ಸಂಸ್ಕಾರವೇ ಕಾರಣ. ಮಾದೇಗೌಡ ಸರ್ ಅವರಂತಹ ಆದರ್ಶ ಶಿಕ್ಷಕರು ನಮ್ಮನ್ನು ತಿದ್ದಿ ತೀಡಿದ್ದಾರೆ. ನಮ್ಮ ಶಾಲೆಯ ಋಣ ತೀರಿಸುವ ಉದ್ದೇಶದಿಂದ ನಾವು ಶಾಲೆಯ ಅಭಿವೃದ್ಧಿಗೆ ಕೈಲಾದ ನೆರವು ನೀಡಲು ಸಿದ್ಧರಿದ್ದೇವೆ ಎಂದರು.
ಮುಡಾ ಮಾಜಿ ನಿರ್ದೇಶಕ ಎಂ.ಕೃಷ್ಣ ಇತರರಿದ್ದರು.