ಕೆ.ಎಂ.ದೊಡ್ಡಿಯ ಮದ್ದೂರು-ಮಳವಳ್ಳಿ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಯಿತು. ಸುಧಾ, ಅನಿಲ್ ಕುಮಾರ್, ಅನಿತಾ ರಾಜಣ್ಣ ಇದ್ದರು. 
ಮಂಡ್ಯ

ಸುಗಮ ಸಂಚಾರಕ್ಕಾಗಿ ಮಾರ್ಗಸೂಚಿ ನಿಗದಿ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಭಾರತೀನಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾ ಮಾಹಿತಿ
  • ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ಎರಡೂ ಬದಿಯಲ್ಲಿನ ಪಾದಚಾರಿ ಮಾರ್ಗ ತೆರವು
ಕೆ.ಎಂ.ದೊಡ್ಡಿ: ಪಾದಚಾರಿಗಳು, ವಾಹನಗಳ ಸುಗಮ ಸಂಚಾರ, ರಸ್ತೆ ಬದಿ ವ್ಯಾಪಾರಗಳಿಗಾಗಿ ಇಲ್ಲಿನ ಸ್ಥಳೀಯ ಗ್ರಾಮ ಪಂಚಾಯಿತಿ ಮಾರ್ಗಸೂಚಿಗಳನ್ನು ನಿಗದಿ ಪಡಿಸಿದೆ ಎಂದು ಭಾರತೀನಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾ ತಿಳಿಸಿದರು.
ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ಎರಡೂ ಬದಿಯಲ್ಲಿನ ಪಾದಚಾರಿ ಮಾರ್ಗ ತೆರವುಗೊಳಿಸಿದ ಬಳಿಕ ಬಿಳಿಬಣ್ಣದ ಗೆರೆ ಎಳೆದು ಬೀದಿ ಬದಿ ವ್ಯಾಪಾರಸ್ಥರು ಹಾಗೂ ವಾಹನ ನಿಲುಗಡೆ ಮಾಡುವ ಸವಾರರಿಗೆ ಅರಿವು ಮೂಡಿಸಿ ಮಾತನಾಡಿದರು.
ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, ಬೀದಿಬದಿ ವ್ಯಾಪಾರಿಗಳು ವ್ಯಾಪಾರವನ್ನು ನಿಗದಿತ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳನ್ನು ನಿಗದಿತ ಸ್ಥಳದಲ್ಲಿ ನಿಲುಗಡೆಗೊಳಿಸದೆ ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದರು.
ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆ.ಎಂ.ದೊಡ್ಡಿ ಪೊಲೀಸರ ಜತೆಗೂಡಿ ಪಾದಚಾರಿ ಮಾರ್ಗಕ್ಕೆ ಬಿಳಿಬಣ್ಣದ ಗೆರೆ ಎಳೆಯಲಾಗಿದೆ. ಬೀದಿಬದಿ ವ್ಯಾಪಾರಿಗಳು, ದ್ವಿಚಕ್ರ ವಾಹನ ಸವಾರರು ಬಿಳಿ ಪಟ್ಟೆಯ ರಸ್ತೆಯೊಳಗೆ ವ್ಯಾಪಾರ ಹಾಗೂ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಸೂಚಿಸಿದರು.
ಪೊಲೀಸ್ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ಮಾತನಾಡಿ, ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ಸುಗಮ ಸಂಚಾರಕ್ಕೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಫುಟ್‌ಪಾತ್ ತೆರವು ಕಾರ್ಯ ಆರಂಭಿಸಲಾಗಿದೆ ಎಂದರು.
ಬೀದಿಬದಿ ವ್ಯಾಪಾರಸ್ಥರು ಹಾಗೂ ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಹೀಹಾಗಿ ಸಾರ್ವಜನಿಕರ ಹಿತ ಕಾಯಲು ಕೆಲವು ಮಾರ್ಗಸೂಚಿಗಳನ್ನು ತರಲಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ಪಾದಚಾರಿ ಮಾರ್ಗದ ನಿಗದಿತ ಜಾಗದಲ್ಲಿ ಬಿಳಿ ಗೆರೆ ಎಳೆಯಲಾಗಿದೆ. ಬೀದಿ ಬದಿ ವ್ಯಾಪಾರಸ್ಥರು, ದ್ವಿಚಕ್ರ ವಾಹನ ಸವಾರರು ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಬೇಕು. ಬಿಳಿಪಟ್ಟೆ ಹೊರಭಾಗದಲ್ಲಿ ದ್ವಿಚಕ್ರವಾಹನ ನಿಲ್ಲಿಸಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಅನಿತಾ ರಾಜಣ್ಣ, ಸದಸ್ಯರಾದ ಪುಟ್ಟರಾಮು, ಕೆ.ವಿ.ಶ್ರೀನಿವಾಸ್ ,ಕೆ.ಪಿ.ದೊಡ್ಡಿ ಸಿದ್ದರಾಜು, ವಕ್ರತುಂಡ ವೆಂಕಟೇಶ್, ಗುಡಿಗೆರೆ ಮಂಜುನಾಥ್, ಮಿಥುನ್, ಎಎಸ್ ಐ ವೆಂಕಟೇಶ್, ಸಿಬ್ಬಂದಿಗಳಾದ ಅರುಣ್, ಚೇತನ್, ಶ್ರೀಕಾಂತ್ ಹಲವರು ಉಪಸ್ಥಿತರಿದ್ದರು.