ಗುರುದೇವರಹಳ್ಳಿ ಹಾಗೂ ಕಾಲನಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕದಲೂರು ಉದಯ್ ಭೂಮಿಪೂಜೆ ನೆರವೇರಿಸಿದರು.ಬಿ.ಬಸವರಾಜು, ಎ.ಎಸ್.ರಾಜೀವ್ ಇತರರಿದ್ದರು.  
ಮಂಡ್ಯ

ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕದಲೂರು ಉದಯ್ ಹೇಳಿಕೆ
ಕೆ.ಎಂ.ದೊಡ್ಡಿ: ಫಲಾನುಭವಿಗಳ ಪರಿಷ್ಕರಣೆ ಹೊರತು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಗುರುದೇವರಹಳ್ಳಿ ಹಾಗೂ ಕಾಲನಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಬುಧವಾರ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ಅನರ್ಹ ಫಲಾನುಭವಿಗಳಿಗೆ ಪಾಲಾಗುತ್ತಿರುವುದನ್ನು ತಡೆಯಲು, ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸುವ ಉದ್ದೇಶದಿಂದ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದ ಅಭಿವೃದ್ಧಿ ಸಹಿಸಲಾಗದೆ ವಿರೋಧ ಪಕ್ಷದವರು ಬಿಡದಿ ಟೌನ್ ಶಿಪ್ ಯೋಜನೆ ವಿಚಾರದಲ್ಲಿ ಆರೋಪಗಳನ್ನು ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ಆರೋಪಕ್ಕೆ ಅಭಿವೃದ್ಧಿ ಕೆಲಸಗಳ ಮೂಲಕ ಉತ್ತರಿಸಲಾಗುವುದು ಎಂದು ತಿಳಿಸಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮದ್ದೂರು ಕ್ಷೇತ್ರದಲ್ಲಿ ಜನತೆ ನನ್ನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಕ್ಷೇತ್ರದ ಜನತೆ ಋಣ ತೀರಿಸುವ ನಿಟ್ಟಿನಲ್ಲಿ ಸುಮಾರು 2000 ಕೋಟಿ ರೂ. ಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಇನ್ನುಳಿದ ಎರಡು ವರ್ಷಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಗೆ ಒಂದು ಮಂತ್ರಿ ಸ್ಥಾನ ಸಿಗುವುದು ಖಚಿತ. ಮತ್ತೊಂದು ಸ್ಥಾನ ನೀಡುವ ಬಗ್ಗೆ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಯಿತು.
ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಬಿ.ಬಸವರಾಜು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಎಸ್ಸಿ ವಿಭಾಗದ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಜಾಪ್ರಿಯಾ ವೆಂಕಟೇಶ್, ಲೋಕೋಪಯೋಗಿ ಇಲಾಖೆ ಎಇಇ ರಾಜೇಶ್, ಮುಖಂಡರಾದ ಅಪ್ಪಾಜಿಗೌಡ, ಗಿರೀಗೌಡ, ಮರಿಕಾಳ ಹೆಗ್ಡೆ ಇತರರಿದ್ದರು.