ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿದರು.  
ಮಂಡ್ಯ

ಸಾರ್ವಜನಿಕರಿಗೆ ಬಸ್ ಸೌಲಭ್ಯ ಕಲ್ಪಿಸಿ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಸೂಚನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆ
  • ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಆಯೋಜನೆ
ಮಂಡ್ಯ: ಶಕ್ತಿ ಯೋಜನೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮಂಡ್ಯಯಿಂದ ಮೈಸೂರಿಗೆ ಪ್ರತಿ 15 ನಿಮಿಷಕ್ಕೆ ಬಸ್ ಸಂಚಾರದ ಸೌಲಭ್ಯ ಕಲ್ಪಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾತ್ರಿ 7ಗಂಟೆಯಿಂದ 9 ಗಂಟೆ ವೇಳೆಯಲ್ಲಿ ಪ್ರಯಾಣಿಸುವಾಗ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಿಕೊಡಬೇಕು ಎಂದರು.
ಅನ್ನಸುವಿಧಾ ಯೋಜನೆ ಮೂಲಕ 75 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಆದರೆ ಕೆಲವರ ಬಳಿ ಮೊಬೈಲ್ ಇಲ್ಲದ ಕಾರಣ ಓಟಿಪಿ ಪಡೆದು ಪಡಿತರ ತಲುಪಿಸಲು ಸಾಧ್ಯವಾಗುತ್ತಿಲ್ಲ. ಮಾನವಿಯತೆ ದೃಷ್ಟಿಯಿಂದ ವಯಸ್ಕರಿಗೆ ಪಡಿತರವನ್ನು ನೀಡಿ. ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಯುವನಿಧಿ ಯೋಜನೆಯ ಕುರಿತಾಗಿ ಹೆಚ್ಚಿನ ಪ್ರಚಾರ ಕೈಗೊಳ್ಳಿ. ಸೂಚನಾ ಫಲಕಗಳನ್ನು ಅಳವಡಿಸಿ ಅರಿವು ಮೂಡಿಸಿ. ಮಾತ್ರವಲ್ಲದೆ ಯುವ ಜನತೆಗೆ ತರಬೇತಿ ಕಾರ್ಯಾಗಾರ ಮಾಡಬೇಕು ಎಂದು ಹೇಳಿದರು.
ಪ್ರಾಧಿಕಾರದ ಉಪಾಧ್ಯಕ್ಷ ಪ್ರಶಾಂತ್‌ಬಾಬು ಮಾತನಾಡಿ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿ ಮರಣ ಹೊಂದಿದ ನಂತರ ನ್ಯಾಯಬೆಲೆ ಅಂಗಡಿಯಲ್ಲಿ ನೋಂದಣಿಯನ್ನು ರದ್ದು ಮಾಡುಬೇಕು. ಈ ನಿಟ್ಟಿನಲ್ಲಿ ತಾಲೂಕುವಾರು ಮರಣ ಹೊಂದಿದ ಫಲಾನುಭವಿಗಳ ಮಾಹಿತಿಯನ್ನು ಕಲೆ ಹಾಕುವಂತೆ ಸೂಚನೆ ನೀಡಿದರು.
ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಎಚ್.ರಾಜೇಂದ್ರ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 200 ಯುನಿಟ್ ಬಳಸುವಂತಹ ಫಲಾನುಭವಿಗಳನ್ನು ಗುರುತಿಸಿ. ಅಂತೆಯೇ ಗೃಹ ಜ್ಯೋತಿಯ ಸದ್ಬಳಕೆ ಕುರಿತು ಪರಿಶೀಲಿಸಬೇಕು. ಜಿಲ್ಲೆಯಲ್ಲಿ 200 ಯುನಿಟ್ ಬಳಸುವ ಫಲಾನುಭವಿಗಳು ಶೇ.3ರಷ್ಟು ಅಂದರೆ 15,000 ಕುಟುಂಬ ಇರುವುದಾಗಿ ಮಾಹಿತಿ ಇದೆ. ಹೊಸ ಮನೆಗಳಿಗೆ ಸರ್ಕಾರದ ನಿಯಮದಂತೆ ಕಡ್ಡಾಯವಾಗಿ 58 ಯೂನಿಟ್ ನೀಡಬೇಕೆಂದು ತಿಳಿಸಿದರು.
ಜಿಪಂ ಯೋಜನಾಧಿಕಾರಿ ಧನುಷ್, ಪ್ರಾಧಿಕಾರದ ಶಿವಣ್ಣ, ಕೆ.ಹನುಮಂತಯ್ಯ, ಬಿ.ಪಿ.ಅಜಯ್‌ಕುಮಾರ್, ಎ.ಬಿ.ಕುಮಾರ, ಕೆ.ರುದ್ರಪ್ಪ, ವೀಣಾ, ಶಂಕರೇಗೌಡ, ಬಸವರಾಜು, ಮಹಮದ್ ಅನ್ಸರ್, ಬಿ.ಎಂ.ರಮೇಶ್, ಪಿ.ಮಾದೇಶ ಇತರರಿದ್ದರು.