ಕಿಕ್ಕೇರಿಯ ಕೆಪಿಎಸ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನದ ಅಂಗವಾಗಿ ಜಾಥಾ ಕಾರ್ಯಕ್ರಮ ನಡೆಯಿತು. ವೈ.ಕೆ.ತಿಮ್ಮೇಗೌಡ, ಮಮತಾ, ಕೃಷ್ಣೇಗೌಡ, ವೆಂಕಟೇಶ್, ಮಹದೇವಯ್ಯ ಇತರರಿದ್ದರು. 
ಮಂಡ್ಯ

ಶುದ್ಧ ಗಾಳಿಗಾಗಿ ಗಿಡಗಳನ್ನು ಬೆಳೆಸಿ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಸಲಹೆ
  • ಜಾಗೃತಿ ಜಾಥಾ
ಕಿಕ್ಕೇರಿ: ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದರೆ ಭವಿಷ್ಯದಲ್ಲಿನ ಉಸಿರು ಗಟ್ಟಿಯಾಗಲಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ತಿಳಿಸಿದರು.
ಇಲ್ಲಿನ ಕೆಪಿಎಸ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಜಗದೀಶ ಚಂದ್ರಬೋಸ್ ಇಕೋ ಕ್ಲಬ್, ಸ್ಪಂದನಾ ೌಂಡೇಷನ್, ಸ್ವಾಮಿ ವಿವೇಕಾನಂದ ಸ್ವಯಂ ಸೇವಾ ಪ್ರತಿಷ್ಠಾನ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಸಿಲಿನ ತಾಪದಿಂದ ವಿಶ್ವವೇ ಕುದಿಯುತ್ತಿದೆ. ತಿನ್ನುವ ಆಹಾರ, ಗಾಳಿ, ನೀರು ಎಲ್ಲವೂ ವಿಷಮಯವಾಗಿದೆ. ಓಜೋನ್ ಪದರ ಕಳಚಿ ಬಾರದ ರೋಗಗಳು, ಉಸಿರಾಟದ ತೊಂದರೆ, ಶ್ವಾಸಕೋಶ, ಹೃದಯ ಸಂಬಂಧಿ ಸಮಸ್ಯೆ, ಶುದ್ಧಗಾಳಿಗೆ ಹಾಹಾಕಾರ ಉಂಟಾಗುತ್ತಿದೆ ಎಂದರು.
ಅರಣ್ಯ ನಾಶ, ನಗರೀಕರಣ, ಕೈಗಾರಿಕೆ, ವಾಹನ ದಟ್ಟಣೆಯಿಂದ ಪರಿಸರ ಮಾಲಿನ್ಯವಾಗುತ್ತಿದೆ. ಬದುಕಲು ಶುದ್ಧ ಗಾಳಿಗಾಗಿ ಗಿಡ ಬೆಳೆಸಿ ಉಳಿಸಲು ಮುಂದಾಗಬೇಕಿದೆ. ಇದು ಮಕ್ಕಳಿಂದ ಮಾತ್ರ ಸಾಧ್ಯವಾಗಲಿದ್ದು, ಮಕ್ಕಳಲ್ಲಿ ಪರಿಸರ ಪಾಠ ನಿತ್ಯಮಂತ್ರವಾಗಿಸಿ. ಮಕ್ಕಳ ಹಿರಿಯರ ಹೆಸರಿನಲ್ಲಿ ಗಿಡ ನೆಟ್ಟು ಪೋಷಿಸಲು ಹುರಿದುಂಬಿಸಿ. ರಸಪ್ರಶ್ನೆ ನಡೆಸಿ ಬಹುಮಾನ ನೀಡಿ. ಖುಷಿಯಿಂದ ಮಕ್ಕಳು ಪರಿಸರ ಉಳಿಸಲಿದ್ದಾರೆ ಎಂದು ಹೇಳಿದರು.
ಮಕ್ಕಳಿಗೆ ಬೀಜದ ಉಂಡೆ ಮಾಹಿತಿ ನೀಡಿ. ಮರ ಇಲ್ಲದ ಕಡೆ ಮರ ಬೆಳೆದು ಜೀವವೈವಿಧ್ಯ ಉಳಿವಿಗೆ ಸಹಕಾರಿಯಾಗಲಿದೆ. ಪರಿಸರ ಸಮತೋಲನದಿಂದ ಮಾತ್ರ ಜೀವ ಜಗತ್ತು ಉಳಿಯಲು ಸಾಧ್ಯ. ಪ್ರಾಣವಾಯು ಆರೋಗ್ಯಕರವಾಗಲು ಮರಗಿಡಗಳ ಪಾತ್ರ ದೊಡ್ಡದು. ಹುಟ್ಟಿನಿಂದಲೇ ನೂರಾರು ಆರೋಗ್ಯ ಸಮಸ್ಯೆ ಉಂಟಾಗಲು ನಮ್ಮ ಪರಿಸರ ಮಾಲಿನ್ಯ ಕಾರಣ. ಎಲ್ಲಕ್ಕೂ ಪರಿಹಾರ ನಮ್ಮ ಕೈಯಲಿದೆ. ಶಾಲೆ, ಸುತ್ತಮುತ್ತಲ ಪರಿಸರವನ್ನು ಸಸ್ಯವನವಾಗಿಸಲು ಮಕ್ಕಳಿಗೆ ತಿಳಿ ಹೇಳುವ ಕೆಲಸ ಮೊದಲು ಆಗಬೇಕಿದೆ ಎಂದು ನುಡಿದರು.
ಜಾಥಾ ಕಾರ್ಯಕ್ರಮಕ್ಕೂ ಮೊದಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಮಾತನಾಡಿ, ಶಾಲಾವರಣದಲ್ಲಿ ಹಣ್ಣಿನ ಗಿಡ ನೆಟ್ಟು ಭೂಮಿಯ ರಕ್ಷಣೆ, ಮಣ್ಣಿನ ಸವಕಳಿ ತಡೆಯಲು ಮರಗಿಡಗಳ ಸಂರಕ್ಷಣೆ ಮುಖ್ಯವಾಗಿದೆ. ಹುಟ್ಟುಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸಲು ಹುರಿದುಂಬಿಸಿದರು.
ಮುಖ್ಯಶಿಕ್ಷಕಿ ಮಮತಾ, ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್, ಕೆ.ವಿ.ಬಲರಾಮು ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಮಕ್ಕಳು ಪರಿಸರ ಜಾಗೃತಿ ಕುರಿತು ಬಿತ್ತಿಫಲಕ ಹಿಡಿದು ಘೋಷಣೆ ಕೂಗಿ ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿದರು. ಮುಖ್ಯಶಿಕ್ಷಕಿ ಮಮತಾ, ಡಯಟ್ ಹಿರಿಯ ಉಪನ್ಯಾಸಕ ಮಹದೇವಯ್ಯ, ಶಿಕ್ಷಕರಾದ ಸುರೇಶ್, ಚೈತ್ರಾ, ವಿಷಕಂಠ, ಪುಷ್ಪಾ ಹಾಜರಿದ್ದರು.