ವೇತನ ಪರಿಷ್ಕರಣೆಗೆ ಒತ್ತಾಯಿಸಿ ಮಂಡ್ಯ ನಗರದಲ್ಲಿ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು. 
ಮಂಡ್ಯ

ವೇತನ ಪರಿಷ್ಕರಣೆಗೆ ಆಗ್ರಹ: ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಕನಿಷ್ಟ ವೇತನ ಪರಿಷ್ಕರಣೆ ಮಾಡಿ ಹೊಸ ನೀತಿ ಜಾರಿಗೊಳಿಸಿ
  • ಅನುಷ್ಠಾನ ಮಾಡುವಲ್ಲಿ ವಿಫಲವಾಗಿರುವ ಸರ್ಕಾರ

ಮಂಡ್ಯ:

ಕನಿಷ್ಟ ವೇತನ ಪರಿಷ್ಕರಣೆ ಮಾಡಿ ಹೊಸ ನೀತಿ ಜಾರಿಗೊಳಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು.

ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾವಣೆಗೊಂಡ ನೌಕರರು, ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿದರು. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು ಅನುಸೂಚಿತ ಉದ್ದಿಮೆಗೆ ಕನಿಷ್ಟ ವೇತನ ಪರಿಷ್ಕರಿಸಿ ಸರ್ಕಾರ 2022ರ ಜು.28ರಂದು ಹೊರಡಿಸಿದ್ದ ಅಧಿಸೂಚನೆಗೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು. ಅಧಿಸೂಚನೆಗಳನ್ನು ರದ್ದುಪಡಿಸಿ ರೆಪ್ತಕೋಸ್ ಬ್ರೆಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿ ಅನುಸರಿಸಿ ಕನಿಷ್ಟ ವೇತನ ಹೊರಡಿಸುವಂತೆ ನಿರ್ದೇಶಿಸಿದೆ. ಆದರೂ ಸರ್ಕಾರ ಅದನ್ನು ಅನುಷ್ಠಾನ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಕನಿಷ್ಟ ವೇತನ ಸಲಹಾ ಮಂಡಳಿ ಎರಡು ಬಾರಿ ಸಭೆ ನಡೆಸಿ ಚರ್ಚಿಸಿ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ಕಡತವನ್ನು ಮುಖ್ಯಮಂತ್ರಿಗೆ ತಲುಪಿಸಲಾಗಿತ್ತು. ನಂತರ ಕಡತ ಅನುಮೋದನೆಗೊಂಡು ಕಾರ್ಮಿಕ ಇಲಾಖೆಗೆ ಕಳುಹಿಸಲಾಗಿದೆ. ಕಾರ್ಮಿಕ ಸಚಿವರು ಕನಿಷ್ಟ ವೇತನ ಜಾರಿ ಮಾಡುವಂತೆ 2026ರ ಮೇ 22ರಂದು ಆದೇಶ ಮಾಡಿದ್ದಾರೆ. ಆದರೆ ಈ ಆದೇಶ ಜಾರಿಯಾಗದಂತೆ ತಡೆಯೊಡ್ಡಲು ಕೆಲವು ಖಾಸಗಿ ಆಡಳಿತ ಮಂಡಳಿಗಳ ಚಟುವಟಿಕೆಯನ್ನು ಗಮನಿಸಿ ಸಂಘ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕೋರ್ಟ್ ನೋಟೀಸ್ ನೀಡಿ ವಿಚಾರಣೆ ಆರಂಭವಾಗಿದೆ. ಇಷ್ಟೆಲ್ಲ ಬೆಳವಣಿಗೆಗಳೂ ನಡೆದರೂ ಖಾಸಗಿಯವರ ಷಡ್ಯಂತ್ರದಿಂದಾಗಿ ವೇತನ ಜಾರಿಯಾಗದೆ ಹಾಗೆಯೇ ತಡೆಹಿಡಿಯಲಾಗಿದೆ. ಒಂದು ವೇಳೆ ಕನಿಷ್ಟ ವೇತನ ಜಾರಿ ಮಾಡದಿದ್ದಲ್ಲಿ ಕಚೇರಿ ಕೆಲಸಕ್ಕೆ ಗೈರು ಹಾಜರಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಎಂ.ಎಂ.ಶಿವಕುಮಾರ್, ಬಸವರಾಜು, ಸಿ.ಕುಮಾರಿ, ನಾಗರಾಜು, ರಮೇಶ್, ನಿಂಗೇಗೌಡ, ಗಿರೀಗೌಡ, ಚಿರಂಜೀವಿ, ಜ್ಯೋತಿ, ಆನಂದ್, ಶೀಲಾ ಇತರರಿದ್ದರು.