ಸುದ್ದಿಗೋಷ್ಠಿಯಲ್ಲಿ ಪರೀಕ್ಷಾ ನಿಯಂತ್ರಕ ಕೆ.ಸಿ.ಸುಂದ್ರೇಶ್, ಉಪ ಪರೀಕ್ಷಾ ನಿಯಂತ್ರಕ ಡಾ.ಕೆ.ಟಿ.ಗಣೇಶ್ ಇದ್ದರು.
ಕೆ.ಎಂ.ದೊಡ್ಡಿ: ಭಾರತೀ ಕಾಲೇಜಿನ ಪದವಿ ಪ್ರದಾನ ಸಮಾರಂಭವನ್ನು ಮೇ 23ರಂದು ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ತಿಳಿಸಿದರು.
ಭಾರತೀ ಕಾಲೇಜು 2019-2020ನೇ ಸಾಲಿನಿಂದ ಯುಜಿಸಿಯಿಂದ ಸ್ವಾಯತ್ತ ಪಡೆಯುವುದರ ಮೂಲಕ ಮಂಡ್ಯ ಜಿಲ್ಲೆಯಲ್ಲಿ 10 ವರ್ಷಗಳಿಗೆ ಸ್ವಾಯತ್ತವನ್ನು ಪಡೆದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣದ ಸಂಜೀವಿನಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭಾರತೀ ಕಾಲೇಜು ಪ್ರಸ್ತುತವಾಗಿ ಸ್ನಾತಕೋತ್ತರ ಹಾಗೂ ಸಂಶೋಧನಾ ವಿಭಾಗಗಳನ್ನು ಒಳಗೊಂಡಿದ್ದು ಪದವಿಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಗಣಕಯಂತ್ರ ವಿಭಾಗಗಳನ್ನು ಒಳಗೊಂಡಿದ್ದು, ಸ್ನಾತಕೋತ್ತರ ವಿಭಾಗಗಳಲ್ಲಿ ಕನ್ನಡ, ಎಂ.ಕಾಂ, ರಸಾಯನಶಾಸ್ತ್ರ, ಸಾವಯವ ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಜೀವರಸಾಯನಶಾಸ್ತ್ರ, ಎಂಎಸ್‌ಡಬ್ಲುೃ ಮತ್ತು ಆಹಾರ ವಿಜ್ಞಾನ ಮತ್ತು ಪೋಷಣೆ ಒಟ್ಟು 11 ವಿಭಾಗಗಳನ್ನೊಳಗೊಂಡ ಶೈಕ್ಷಣಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಸ್ನಾತಕೋತ್ತರ ವಿಭಾಗವು 2013ರಲ್ಲಿ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿ 6 ವಿಭಾಗಗಳಲ್ಲಿ ಸಂಶೋಧನಾ ಮಾರ್ಗದರ್ಶನವನ್ನು ನೀಡುತ್ತಾ ಬಂದಿದೆ. 20 ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧವನ್ನು ನುರಿತ ಪ್ರಾಧ್ಯಾಪಕರ ಮೂಲಕ ಮಂಡಿಸಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ ಎಂದರು.
ಪ್ರಸ್ತುತ ಭಾರತೀ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರವು ನಾಲ್ಕನೇ ಪದವಿ ಪ್ರದಾನ ಸಮಾರಂಭವನ್ನು ಆಚರಣೆ ಮಾಡುತ್ತಿದೆ. ಪದವಿ ವಿಭಾಗದ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಗಣಕಯಂತ್ರ ವಿಭಾಗದಿಂದ 205 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ನಗದು ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತಿದೆ ಎಂದರು.
23ನೇ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣ ಪತ್ರವನ್ನು ಸಹ ನೀಡಿ ಗೌರವಿಸಲಾಗುತ್ತಿದೆ. ಹಾಗೆಯೇ ವಿಭಾಗವಾರು ನುರಿತ ನಿವೃತ್ತ ಅಧ್ಯಾಪಕರು ವಿಭಾಗಕ್ಕೆ ನೀಡಿರುವ ದತ್ತಿ ಹಣದಿಂದ, ಐಚ್ಚಿಕ ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.
ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು 297 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ, ಭೌತವಿಜ್ಞಾನ ವಿಭಾಗಗಳು, ಜೀವವಿಜ್ಞಾನ ವಿಭಾಗಗಳು (ಲೈಫ್ ಸೈನ್ಸಸ್), ಎಂಕಾಂ, ಮತ್ತು ಕನ್ನಡ(ಎಂಎಸ್‌ಡಬ್ಲುೃ) ವಿಭಾಗಗಳಲ್ಲಿ ಹೆಚ್ಚು ಅಂಕ ಪಡೆದು ಪ್ರಥಮ ರ‌್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ನಗದು ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. 11 ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ರ‌್ಯಾಂಕ್ ಪಡೆದ 33 ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತಿದೆ ಎಂದರು.
ಭಾರತೀ ಶಿಕ್ಷಣ ಸಂಸ್ಥೆಯ ಛೇರ‌್ಮನ್ ಮಧು ಜಿ. ಮಾದೇಗೌಡ, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ನಾಗರಾಜು, ಮಂಡ್ಯ ವಿವಿ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ, ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಯ್ ಜಿ.ಮಧು, ಡೀನ್ ಪ್ರೊ.ಎಸ್.ನಾಗರಾಜು, ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪರೀಕ್ಷಾ ನಿಯಂತ್ರಕ ಕೆ.ಸಿ.ಸುಂದ್ರೇಶ್, ಉಪ ಪರೀಕ್ಷಾ ನಿಯಂತ್ರಕ ಡಾ.ಕೆ.ಟಿ.ಗಣೇಶ್ ಇದ್ದರು.