ಮಂಡ್ಯ ತಾಲೂಕು ತಗ್ಗಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. 
ಮಂಡ್ಯ

ಸಮಗ್ರ ಅಭಿವೃದ್ಧಿಯೇ ನಮ್ಮ ಸಂಕಲ್ಪ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ತಗ್ಗಹಳ್ಳಿಯಲ್ಲಿ ಸರ್ಕಾರಿ ಶಾಲೆ ಕಟ್ಟಡ ಲೋಕಾರ್ಪಣೆ
  • ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಸೇರಿದಂತೆ ಹಲವರು ಭಾಗಿ
ಮಂಡ್ಯ: ಮಂಡ್ಯ ಜಿಲ್ಲೆ ಸಾಮಾನ್ಯವಾದುದಲ್ಲ. ದೇಶವನ್ನೇ ಆಳುವ ಶಕ್ತಿಯುಳ್ಳ ನಾಯಕರನ್ನು ನೀಡಿದ ಪುಣ್ಯಭೂಮಿ. ಈ ಮಣ್ಣಿನ ಅಭಿವೃದ್ಧಿಗಾಗಿ ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಜೆ.ಕೆ ಟೈಯರ್ ಸಂಸ್ಥೆಯಿಂದ ಸಿಎಸ್‌ಆರ್ ನಿಧಿಯಿಂದ ನಿರ್ಮಾಣ ಮಾಡಿರುವ ಸರ್ಕಾರಿ ಶಾಲೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪುತ್ತಿದೆ. ಪ್ರತಿ ಮನೆಗೆ 2 ಸಾವಿರ ರೂ, ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ ಹಾಗೂ ಅಕ್ಕಿ ವಿತರಣೆ ಯಶಸ್ವಿಯಾಗಿ ನಡೆಯುತ್ತಿದೆ. ತಾಂತ್ರಿಕ ಕಾರಣಗಳಿಂದ ಕೆಲವರಿಗೆ ವಿಳಂಬವಾಗಿರಬಹುದು. ಆದರೆ, ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪುವಂತೆ ನಾವು ಕ್ರಮ ವಹಿಸುತ್ತಿದ್ದೇವೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಅಂದಾಜು 12,000 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಜಿಲ್ಲೆಯ ಆರ್ಥಿಕತೆಗೆ ಹೊಸ ವೇಗ ನೀಡಿದೆ. 1939ರ ನಂತರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೃಷಿ ಸಂಶೋಧನೆ ಮತ್ತು ಕೃಷಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ. ಕೃಷಿ ವಿದ್ಯಾಲಯ ಮಂಡ್ಯಕ್ಕೆ ಬಂದಿರುವುದಕ್ಕೆ ಬೆಲೆ ಕಟ್ಟಲಾಗದು. ಮುಂದಿನ ದಿನದಲ್ಲಿ ಇದರ ಮಹತ್ವ ಜಿಲ್ಲೆಯ ಜನರಿಗೆ ತಿಳಿಯಲಿದೆ ಎಂದರು.
ಜಿಲ್ಲೆಯನ್ನು ಮುನ್ನಡೆಸುತ್ತಿರುವ ಜಿಲ್ಲಾಧಿಕಾರಿ, ಎಸ್‌ಪಿ ಹಾಗೂ ಸಿಇಒ ಅವರು ಕೂಡ ಸರ್ಕಾರಿ ಶಾಲೆಯಲ್ಲಿ ಓದಿದವರೇ ಆಗಿದ್ದಾರೆ. ಆಂಗ್ಲ ಭಾಷೆ ಕೇವಲ ಒಂದು ಸಂವಹನಕ್ಕೆ ಮಾತ್ರ. ಸಂಸ್ಕಾರ ಮತ್ತು ವಿಷಯದ ಮೇಲಿನ ಜ್ಞಾನವಿದ್ದರೆ ಯಾರೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಜಿಲ್ಲೆಯ ಅಭಿವೃದ್ಧಿ ಕೆಲಸಗಳ ಬಗ್ಗೆ ಟೀಕೆ ಮಾಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸಿಆರ್‌ಎಸ್, ಯಾರೋ ಒಬ್ಬರ ವಿರೋಧಕ್ಕಾಗಿ ನಾವು ಕೆಲಸ ಮಾಡುತ್ತಿಲ್ಲ. ಜಿಲ್ಲೆಯ ಸರ್ವಾಂಗೀಣ ಪ್ರಗತಿಯೇ ನಮ್ಮ ಗುರಿ. ಅಭಿವೃದ್ಧಿ ವಿಚಾರದಲ್ಲಿ ನನ್ನೆದುರು ಬಂದು ವಾದ ಮಾಡಿ ಗೆಲ್ಲಲಿ. ಮಂಡ್ಯವನ್ನು ಮೈಸೂರು ಮತ್ತು ಬೆಂಗಳೂರಿನ ಮಟ್ಟಕ್ಕೆ ಬೆಳೆಸುವ ದೂರದೃಷ್ಟಿ ನಮ್ಮದಾಗಿದೆ. ಇದಕ್ಕಾಗಿ ರಾಜಕೀಯ ಮರೆತು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಜೆ.ಕೆ.ಟೈಯರ್‌ನ ಉಪಾಧ್ಯಕ್ಷ ಈಶ್ವರ್‌ರಾವ್, ಜಗದೀಶ್, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕಾಂಗ್ರೆಸ್ ಮಹಿಳಾ ಮುಖಂಡರಾದ ಪಲ್ಲವಿ, ಯಶೋಧಾ, ಬಿಇಒ ಮಹದೇವು ಇತರರಿದ್ದರು.