ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಕಟ್ಟಡ ಲೋಕಾರ್ಪಣೆ ಸಮಾರಂಭದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಕ್ಕಳೊಂದಿಗೆ ಕಾಲ ಕಳೆದರು.
- ತಗ್ಗಹಳ್ಳಿಯಲ್ಲಿ ಸರ್ಕಾರಿ ಶಾಲಾ ಕಟ್ಟಡ ಲೋಕಾರ್ಪಣೆ
- ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವರು ಭಾಗಿ
ಮಂಡ್ಯ: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಬಲಪಡಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಎರಡು ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಗ್ಗಹಳ್ಳಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಸಂಸದರಾದರೆ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂಬ ಅಭಿಲಾಷೆಯಿಂದ ನನ್ನ ಗೆಲುವಿಗೆ ಜಿಲ್ಲೆಯ ಮತದಾರರು ಪುಷ್ಠಿ ತುಂಬಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದ ಹಾಗೂ ಕೇಂದ್ರ ಸಚಿವ ಪದವಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ನನ್ನ ಜೀವ ಇರುವವರೆಗೂ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು.
ಕುಟುಂಬ ಬಾಂಧವ್ಯಗಳು ನಶಿಸುತ್ತಿರುವ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಮಕ್ಕಳನ್ನು ಭವಿಷ್ಯದ ಸತ್ಪ್ರಜೆಗಳಾಗಿ ರೂಪಿಸುವಲ್ಲಿ ವಿಶೇಷ ಪಾತ್ರ ವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 1 ಲಕ್ಷ ಶಿಕ್ಷಕರ ನೇಮಕಕ್ಕೆ ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶೇ.50ರಷ್ಟು ಮಹಿಳಾ ಶಿಕ್ಷಕರು ಕರ್ತವ್ಯದಲ್ಲಿದ್ದಾರೆಂದು ಸ್ಮರಿಸಿದರು.
ಜಿಲ್ಲೆಯ ಮತದಾರರ ಆರ್ಶೀವಾದದಿಂದ ಸಂಸದನಾಗಿ ಆಯ್ಕೆಯಾಗಿ ಕೇಂದ್ರ ಸಚಿವನಾದ ಬಳಿಕ ಕೈಗಾರಿಕೆಗಳ ಸಾಮಾಜಿಕ ಹೊಣಿಗಾರಿಕೆ ನಿಧಿ(ಸಿಎಸ್‌ಆರ್)ಯಲ್ಲಿ ತಗ್ಗಹಳ್ಳಿ ಗ್ರಾಮದಲ್ಲಿ ನಾಲ್ಕು ಕೊಠಡಿ ನಿರ್ಮಾಣ ಮಾಡಲಾಗಿದೆ. ಮಿಚಿಲಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ 32.50 ಲಕ್ಷ ರೂ ವೆಚ್ಚದದಲ್ಲಿ ಎರಡು ಕೊಠಡಿ, ಜೆ.ಕೆ.ಟೈಯರ್ ಆ್ಯಂಡ್ ಇಂಡಸ್ಟ್ರೀಸ್ ಒಡೆತನದ ಸಿಎಸ್‌ಆರ್ ಅನುದಾನದಲ್ಲಿ ಎರಡು ಶಾಲಾ ಕೊಠಡಿ ನಿರ್ಮಿಸಲಾಗಿದೆ. ಮಿಚಿಲಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಸಿದ್ದಾಥ್‌ಪ್ರಸಾದ್ ಅವರ ಸಹಕಾರದಿಂದ ಜಿಲ್ಲೆಯಲ್ಲಿ ಪ್ರಥಮವಾಗಿ ಶಾಲಾ ಕಟ್ಟಡ ನಿರ್ಮಿಸಲಾಗಿದೆ ಎಂದರು.
ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಜಿಲ್ಲೆಯ ಅಭಿವೃದ್ದಿಗಾಗಿ ತಮ್ಮ ಅಧಿಕಾರವನ್ನು ಬಳಸಿ ಸಿಎಸ್‌ಆರ್ ಅನುದಾನದಲ್ಲಿ ಶಾಲಾ ಕಟ್ಟಡ ನಿರ್ಮಿಸಿರುವುದು ಸಾರ್ಥಕ ಕಾರ್ಯ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯಲು ಕುಮಾರಸ್ವಾಮಿ ಅವರಿಗೆ ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಕೆ.ಸುರೇಶ್‌ಗೌಡ, ಜಿಲ್ಲಾಧ್ಯಕ್ಷ ಡಿ.ರಮೇಶ್, ಜೆಡಿಎಸ್ ಯುವ ನಾಯಕ ಕೆ.ಎಸ್.ವಿಜಯಾನಂದ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಮುಖಂಡರಾದ ಸಿದ್ದರಾಮೇಗೌಡ, ತಗ್ಗಹಳ್ಳಿ ಪ್ರಸನ್ನ, ಡಾ.ಆದರ್ಶ, ಶಶಿಧರ್ ಬೇಲೂರು, ಎಸ್‌ಡಿಎಂಸಿ ಅಧ್ಯಕ್ಷ ಅನಿಲ್ಕುಮಾರ್, ಡಿಡಿಪಿಐ ಲೋಕೇಶ್, ಬಿಇಒ ಮಹದೇವು ಇತರರಿದ್ದರು.