ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್. 
ಮಂಡ್ಯ

ಸರ್ಕಾರದ ನೀತಿಯಿಂದ ವೃದ್ಧರಿಗೆ ಅನ್ಯಾಯ

ಶ್ರೀರಂಗಪಟ್ಟಣ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಚಾಲ್ತಿಯಲ್ಲಿದೆ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವವ್ಯಸ್ಥೆ ಸಂಪೂರ್ಣ ಕುಸಿದಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 3.6ಲಕ್ಷ ವೃದ್ಧಾಪ್ಯ ವೇತನ ಪಿಂಚಣಿಯ ಫಲಾನುಭವಿಗಳಿದ್ದು, ಇವರಲ್ಲಿ 60 ಸಾವಿರ ಜನರನ್ನು ಪರಿಷ್ಕರಣೆ ಹೆಸರಲ್ಲಿ ಯೋಜನೆಯಿಂದ ಏಕಾಏಕಿ ಕೈಬಿಡಲಾಗಿದೆ. ತಾಲೂಕಿನ 7 ಸಾವಿರ ಅರ್ಹ ಫಲಾನುಭವಿಗಳು ಸಹ ಸರ್ಕಾರದ ಕೆಲವೊಂದು ಅವೈಜ್ಞಾನಿಕ ನಿರ್ಧಾರಗಳಿಂದ ಬೀದಿಗೆ ಬಿದ್ದಿದ್ದಾರೆ. ರಾಜ್ಯ ಸರ್ಕಾರದ ನಿಯಮದಂತೆ ಬಿಪಿಎಲ್ ಕಾರ್ಡ್ ಬಳಕೆದಾರರು ವಾರ್ಷಿಕ 1.20 ಲಕ್ಷ ಆದಾಯ ಪ್ರಮಾಣ ಇದ್ದಲ್ಲಿ ಅವರು ಯೋಜನೆಗೆ ಅರ್ಹರು ಎಂಬುದು ನಿಗದಿಪಡಿಸಲಾಗಿತ್ತು.
ಆದರೀಗ ವೃದ್ಧಾಪ್ಯ ವೇತನ ಪಿಂಚಣಿಗೆ ಅರ್ಹರಾಗಲು 30 ಸಾವಿರ ರೂ.ಗಳಷ್ಟು ಮಾತ್ರ ಆದಾಯ ಪ್ರಮಾಣ ಇರಬೇಕು, ಹೆಚ್ಚು ಇದ್ದವರು ಈ ಯೋಜನೆಗೆ ಅನರ್ಹರು ಎಂದು ನೀಡಿರುವ ಆದೇಶ ಸಂಪೂರ್ಣ ಅವೈಜ್ಞಾನಿಕ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.