ಮಂಡ್ಯ ನಗರದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಿಂದ ಸಾಮಗ್ರಿ ಜಪ್ತಿ ಮಾಡುತ್ತಿರುವುದು.
- ನಾಲೆ ನಿರ್ಮಾಣ ಕಾಮಗಾರಿಗೆಂದು ಜಮೀನು ಕಳೆದುಕೊಂಡಿದ್ದ ರೈತ
- ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿದ ಕಾವೇರಿ ನೀರಾವರಿ ನಿಗಮ
- ನ್ಯಾಯಾಲಯದ ಸೂಚನೆಯಂತೆ ಸಾಮಗ್ರಿ ಜಪ್ತಿ ಮಾಡಿದ ರೈತ
ಮಂಡ್ಯ: ನಾಲೆ ನಿರ್ಮಾಣ ಕಾಮಗಾರಿಗೆಂದು ಜಮೀನು ಕಳೆದುಕೊಂಡಿದ್ದ ರೈತನಿಗೆ ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಜಪ್ತಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ಅದರಂತೆ ಮಂಗಳವಾರ ಕಚೇರಿಯಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗಲಾಯಿತು.
ಮದ್ದೂರು ತಾಲೂಕು ಹೆಬ್ಬೆರಳು ಗ್ರಾಮದ ರೈತ ಜವರೇಗೌಡ ಅವರಿಗೆ ಭೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ನಗರದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿದ್ದ ಪೀಠೋಪಕರಣ, ಕಂಪ್ಯೂಟರ್‌ಗಳನ್ನು ಜಪ್ತಿ ಮಾಡಲಾಯಿತು. ಜವರೇಗೌಡ ಅವರಿಗೆ ಸೇರಿದ 1.17 ಎಕರೆ ಜಮೀನನ್ನು ಮುತ್ತುರಾಯಕೆರೆ ಪೋಷಕ ನಾಲಾ ನಿರ್ಮಾಣಕ್ಕಾಗಿ ಕಾವೇರಿ ನೀರಾವರಿ ನಿಗಮ ವಶಪಡಿಸಿಕೊಂಡಿತ್ತು. ಆ ಜಮೀನಿಗೆ ಸಂಬಂಧಿಸಿದಂತೆ ರೈತನಿಗೆ ಸ್ವಲ್ಪ ಮಾತ್ರ ಪರಿಹಾರ ನೀಡಲಾಗಿತ್ತು. ಇನ್ನೂ 84,04,717 ರೂ.ಗಳ ಪರಿಹಾರ ನೀಡಬೇಕಿದೆ.
ಪರಿಹಾರ ನೀಡುವಂತೆ ಜವರೇಗೌಡ ಸಾಕಷ್ಟು ಬಾರಿ ಕಚೇರಿಗೆ ಅಲೆದಿದ್ದರೂ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸಿದ್ದರು. ಇದರಿಂದ ಬೇಸತ್ತ ರೈತ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರೈತನಿಗೆ 84,04,717 ರೂ.ಗಳನ್ನು ಪರಿಹಾರ ನೀಡುವಂತೆ ಕಾವೇರಿ ನೀರಾವರಿ ನಿಗಮಕ್ಕೆ 2022ರಲ್ಲೇ ಸೂಚಿಸಿತ್ತು. ಆದಾಗ್ಯೂ ನ್ಯಾಯಾಲಯ ಆದೇಶ ನೀಡಿದ್ದರೂ ಸಹ ಅಧಿಕಾರಿಗಳು ರೈತನಿಗೆ ಪರಿಹಾರ ನೀಡದೆ ನಿರ್ಲಕ್ಷೃ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಮೇಲ್ಮನವಿ ಸಲ್ಲಿಸಿದ ಕಾರಣ ನ್ಯಾಯಾಲಯ ಕಚೇರಿ ಜಪ್ತಿಗೆ ಆದೇಶ ನೀಡಿತ್ತು.
ಅದರಂತೆ ಮಂಗಳವಾರ ನ್ಯಾಯಾಲಯದ ಸಿಬ್ಬಂದಿಯೊಂದಿಗೆ ನಿಗಮದ ಕಚೇರಿಗೆ ಆಗಮಿಸಿದ ರೈತ ಜವರೇಗೌಡ ಮತ್ತು ಆತನ ಪರ ವಕೀಲರು ಕಚೇರಿಯಲ್ಲಿನ ಪೀಠೋಪಕರಣ, ಕಂಪ್ಯೂಟರ್, ಜೆರಾಕ್ಸ್ ಯಂತ್ರ ಸೇರಿದಂತೆ ಇತರೆ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.