ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ. ಉದಯ್ ಅರ್ಹ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಮತ್ತು ಪವರ್ ಟೂಲ್ಸ್ ಗಳನ್ನು ವಿತರಿಸಿದರು. ದೊರೆರಾಜು, ಶಿವಣ್ಣ, ಗುಣವತಿ, ಗಿರೀಶ್ ಇದ್ದರು.
- ಶಾಸಕ ಶಾಸಕ ಕೆ.ಎಂ.ಉದಯ್ ಅಭಿಮತ
ಮದ್ದೂರು: ಆರ್ಥಿಕವಾಗಿ ಹಿಂದುಳಿದಿರುವವರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕಾಭಿವೃದ್ಧಿ ಹೊಂದಿ ಸ್ವಾವಲಂಬಿ ಬದುಕು ಕಟ್ಟಿಕೊಂಡು ಸಾಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಗ್ರಾಮಿಣ ಕೈಗಾರಿಕೆಗಳು, ಜಿ. ಪಂ. ವತಿಯಿಂದ 2025-26ನೇ ಸಾಲಿನಲ್ಲಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆಯಂತ್ರ ಹಾಗೂ ಪವರ್ ಟೂಲ್ಸ್ ಗಳನ್ನು ವಿತರಿಸಿ ಮಾತನಾಡಿದರು.
ಆರ್ಥಿಕವಾಗಿ ಹಿಂದಿಳಿದಿರುವ ಕಾರ್ಮಿಕರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಸರ್ಕಾರ ಉಚಿತವಾಗಿ ಹಲವಾರು ಸಲಕರಣೆಗಳನ್ನು ವಿತರಿಸುತ್ತಿದೆ. ಇದರ ಸದುಪಯೊಗಕ್ಕೆ ಅರ್ಹ ಫಲಾನುಭವಿಗಳು ಮುಂದಾಗುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡು ಉತ್ತಮ ಜೀವನ ಸಾಗಿಸಬೇಕೆಂದರು.
ಗಾರೆಕೆಲಸ, ಮರಗೆಲಸ, ಕ್ಷೌರಿಕ, ಡೋಬಿ, ಮತ್ತು ಮಹಿಳೆಯರಿಗೆ ಅನುಕೂಲವಾಗಲೆಂಬ ನಿಟ್ಟಿನಲ್ಲಿ ತಾಲೂಕಿನ 108 ಮಂದಿಗೆ ಅಗತ್ಯ ಸಲಕರಣೆಗಳನ್ನು ವಿತರಿಸುತಿದ್ದು, ಯಾರೋಬ್ಬರು ಸಲಕರಣೆಗಳನ್ನು ದುರುಪಯೋಗ ಪಡಿಸಿಕೊಳ್ಳದೆ ತಾವುಗಳೆ ಉದ್ಯೋಗ ಕಂಡುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು
ಹೊಲಿಗೆಯಂತ್ರ, ಪವರ್ ಟೂಲ್ಸ್, ಗಳನ್ನು ಇಂದಿನ ಆಧುನಿಕ ಮಾದರಿಯ ಶೈಲಿಯ ಅನುಗುಣವಾಗಿ ವಿದ್ಯುತ್ ಚಾಲಿತ ಯಂತ್ರಗಳನ್ನು ವಿತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೂಲಿ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಹಲವು ಸೌಲಭ್ಯಗಳನ್ನು ಒದಗಿಸಲು ಪ್ರಮಾಣಿಕ ಪ್ರಯತ್ನ ಕೈಗೊಳ್ಳುವುದಾಗಿ ಹೇಳಿದರು.
ಆರ್ಥಿಕವಾಗಿ ಹಿಂದುಳಿದಿರು ಸಮುದಾಯದವರು ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೂ ಹೆಚ್ಚಿನ ಒತ್ತು ನೀಡುವಂತೆ, ಯಾರೋಬ್ಬರು ಶಿಕ್ಷಣದಿಂದ ವಂಚಿತರನ್ನಾಗಿಸದೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಪ್ರಮುಖ ಪಾತ್ರ ವಹಿಸಿ ತಮ್ಮ ಬದುಕನ್ನು ಹಸನಗೊಳಿಸಿ ಕೊಳ್ಳಬೇಕೆಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕರಿಗೆ ಹತ್ತು ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದವರು ಅಗತ್ಯ ಸೌಲಭ್ಯಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಹೊಲಿಗೆ ತರಬೇತಿಯನ್ನು ಪಡೆದುಕೊಂಡು ಸ್ವ ಉದ್ಯೋಗದ ಜತೆಗೆ ಕುಟುಂಬ ನಿರ್ವಹಣೆಯಲ್ಲು ಪ್ರಮುಖ ಪಾತ್ರ ವಹಿಸುತ್ತಿರುವ ಮಹಿಳೆಯರ ಪಾತ್ರ ಅನನ್ಯವೆಂದು ಬಣ್ಣಿಸಿದರು.
ತಾಲೂಕಿನ ವಿವಿಧ ಸಮುದಾಯದ ಅರ್ಹ ಫಲಾನುಭವಿಗಳಿಗೆ ಶಾಸಕ ಕೆ.ಎಂ.ಉದಯ ಅಗತ್ಯ ಸಲಕರಣೆಗಳನ್ನು ವಿತರಿಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಗ್ರಾಮಿಣ ಕೈಗಾರಿಕೆಯ ಉಪ ನಿರ್ದೇಶಕ ದೊರೆರಾಜು, ಅಧಿಕಾರಿಗಳಾದ ಶಿವಣ್ಣ, ಗುಣವತಿ ಹಾಗೂ ಗಿರೀಶ್, ಸ್ಥಳಿಯ ನಿವಾಸಿಗಳು ಇದ್ದರು.