ಕಿಕ್ಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಸಿದ್ದ ವಿಶ್ವ ಪರಿಸರ ದಿನಾಚರಣೆ ಕಾಯಕ್ರಮ ಹಿನ್ನೆಲೆಯಲ್ಲಿ ಗಿಡ ನೆಡಲಾಯಿತು. ಎಂ.ಆರ್. ಸಹದೇವು, ವೆಂಕಟೇಶ್, ನಾಗೇಶ್ ಇದ್ದರು.
ಕಿಕ್ಕೇರಿ: ಪರಿಸರ ಶುದ್ಧವಾಗಿದ್ದರೆ ಮಾತ್ರ ನಾವೆಲ್ಲರೂ ಆರೋಗ್ಯವಾಗಿ ಬದುಕಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಅರಿವು ಮೂಡಿಸಬೇಕಿದೆ ಎಂದು ಪ್ರಾಂಶುಪಾಲ ಎಂ.ಆರ್. ಸಹದೇವು ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಶ್ವ ಪರಿಸರ ದಿನದಲ್ಲಿ ಮಾತನಾಡಿ, ಕೇವಲ ಪರಿಸರ ದಿನದ ನೆನಪಿಗೆ ಗಿಡ ನೆಟ್ಟು ಸಂಭ್ರಮಿಸದೆ ನಿರಂತರವಾಗಿ ಪರಿಸರದ ಖಾಲಿ ಪ್ರದೇಶದಲ್ಲಿ ಗಿಡ ನೆಟ್ಟು ಬೆಳೆಸಿ, ಉಳಿಸುವ ಕೆಲಸವಾಗಬೇಕಿದೆ. ಭವಿಷ್ಯದ ಮಕ್ಕಳಿಗೆ ಗಿಡಮರಗಳ ಪಾತ್ರ ಪರಿಚಯ ಮಾಡಿಕೊಟ್ಟರೆ ಶುದ್ಧ ಗಾಳಿ, ಆರೋಗ್ಯಕರ ವಾತಾವರಣ ಲಭಿಸಲಿದೆ ಎಂದರು.
ಶುದ್ಧ ಗಾಳಿ, ನೀರು ಎಲ್ಲವೂ ಮಾನವನ ಆರೋಗ್ಯಪೂರ್ಣ ಬದುಕಿಗೆ ಬೇಕಿದೆ. ಪ್ಲಾಸ್ಟಿಕ್ ಎಂಬ ಹೆಮ್ಮಾರಿ ನಗರ ಪ್ರದೇಶದಷ್ಟೇ ಗ್ರಾಮೀಣ ಪ್ರದೇಶಕ್ಕೂ ಹಬ್ಬಿದೆ. ಪರಿಣಾಮ ಭೂಮಿ, ನೀರು, ಬೆಳೆದ ಆಹಾರ ಎಲ್ಲವೂ ವಿಷಮಯವಾಗಿದೆ. ಹುಟ್ಟುವ ಮಕ್ಕಳಿಗೆ ನಾನಾ ರೋಗಗಳು ಬರಲು ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆ ಕಾರಣ ಆತಂಕ ವ್ಯಕ್ತಪಡಿಸಿದರು.
ಪರಿಸರ ಪ್ರೇಮಿ ಕೆ.ವಿ.ಬಲರಾಮು ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬುದನ್ನು ಮರೆತು ಅರಣ್ಯ ನಾಶ ಮಾಡಿ ನಮ್ಮ ಜೀವಕ್ಕೆ ನಾವೇ ಆಪತ್ತು ಸೃಷ್ಟಿಕೊಂಡಿದ್ದೇವೆ. ಮಾನವನಷ್ಟೆ ಜಲಚರ, ಪ್ರಾಣಿ ಪಕ್ಷಿಗಳ ಉಳಿವು ಅವಶ್ಯವಾಗಿದೆ ಎಂದರು.
ಪರಿಸರ ಪ್ರೇಮಿ ಊಗಿನಹಳ್ಳಿ ಮಹೇಶ್ ಮಾತನಾಡಿ, ಮಕ್ಕಳ ಹೆಸರಿನಲ್ಲಿ ಗಿಡ ನೆಡಿಸಿ, ಹುಟ್ಟಿದ ಹಬ್ಬದಲ್ಲಿ ಕೇಕ್ ಕತ್ತರಿಸುವ ಬದಲು ಗಿಡ ನೆಟ್ಟು ಬೆಳೆಸುವ ವಾತಾವರಣ ಸೃಷ್ಟಿಸಿದರೆ ತನ್ನಿಂದ ತಾನೇ ಪರಿಸರ ಸಂರಕ್ಷಣೆಯಾಗಲಿದೆ. ನಮ್ಮೆಲ್ಲರ ಆರೋಗ್ಯ ನಮ್ಮ ಕೈಯಲ್ಲಿದ್ದು, ಇದು ಮರಗಿಡ ಬೆಳೆಸುವ, ಕಾಡು ಬೆಳೆಸುವ ಕಾಯಕದಿಂದ ಮಾತ್ರ ಸಾಧ್ಯ. ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯವಾಗಬೇಕು. ರಸ್ತೆಬದಿ ಗಿಡ ನೆಡುವುದರಿಂದ ಪ್ರಾಣಿ ಪಕ್ಷಿಗಳು, ಪಾದಚಾರಿಗಳಿಗೆ ಆಸರೆಯಾಗಲಿದೆ ಎಂದು ನುಡಿದರು.
ಕಾಲೇಜು ಆವರಣದಲ್ಲಿ ವಿವಿಧ ಬಗೆಯ ಗಿಡ ನೆಟ್ಟು ನೀರೆರೆಯಲಾಯಿತು. ಸ್ವಾಮಿ ವಿವೇಕಾನಂದ ಸ್ವಯಂ ಸೇವಾ ಪ್ರತಿಷ್ಠಾನ ಹಾಗೂ ಸ್ಪಂದನಾ ಫೌಂಡೇಷನ್‌ನಿಂದ ಗಿಡ ವಿತರಿಸಲಾಯಿತು. ಮಕ್ಕಳು ಸುತ್ತಮುತ್ತಲಿನ ಪರಿಸರ ಉಳಿಸಲು ಗಿಡ ನೆಟ್ಟು ಬೆಳೆಸುವುದಾಗಿ ಪ್ರತಿಜ್ಞೆ ಮಾಡಿದರು.
ಎನ್.ಎ.ನಾಗೇಶ್, ಅರ್ಪಿತಾ, ಚಂದ್ರಿಕಾ, ಲಾವಣ್ಯ, ಸಹನಾ, ಫಾಜಿಲ್ಲ ಖಾನಂ, ಊಗಿನಹಳ್ಳಿ ಹೇಮಂತ್ ಇತರರಿದ್ದರು.