ಕಿಕ್ಕೇರಿ ಹೋಬಳಿಯ ಗೊಂದಿಹಳ್ಳಿಯಲ್ಲಿ ದಂಡಿಯಮ್ಮ ದೇಗುಲ ನಿರ್ಮಾಣದ ವೇಲೆ ಗುರುವಾರ ಕಿಡಿಗೇಡಿಗಳು ಕೋಣ ಬಲಿ ನೀಡಿ ವಾಮಾಚಾರ ಸಾಮಗ್ರಿ ಬಿಟ್ಟು ಹೋಗಿರುವ ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿರುವುದು.
ಕಿಕ್ಕೇರಿ: ಹೋಬಳಿಯ ಗೊಂದಿಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಗ್ರಾಮದೇವತೆ ದಂಡಿಯಮ್ಮ ದೇಗುಲದ ಮರು ಪ್ರತಿಷ್ಟಾಪನೆ ವೇಳೆ ಕಿಡಿಗೇಡಿಗಳು ಕೋಣನ ಬಲಿ ನೀಡಿದ್ದು ಗ್ರಾಮಸ್ಥರಲ್ಲಿ ಆತಂಕವನ್ನುಂಟುಮಾಡಿದೆ.
ಗುರುವಾರ ತಡರಾತ್ರಿಯಲ್ಲಿ ಈ ಕೃತ್ಯ ನಡೆದಿದ್ದು ಗ್ರಾಮಸ್ಥರು ದಿಗ್ಬ್ರಾಂತರಾಗುವಂತಾಗಿದೆ. ಹಳೆಯದಾದ ಗ್ರಾಮದೇವಿ ಗುಡಿ ನಿರ್ಮಾಣಕ್ಕೆ ದೇವಿ ಅಪ್ಪಣೆ ಆಗಿದ್ದ ಹಿನ್ನೆಲೆಯಲ್ಲಿ ದೇಗುಲ ನೂತನವಾಗಿ ನಿರ್ಮಿಸಲಾಗಿತ್ತು. ದಾನಿಗಳ ಸಹಕಾರದಿಂದ ದೇಗುಲ ನಿರ್ಮಾಣವಾಗಿ ಹಬ್ಬದ ವಾತಾವರಣ ಮೂಡಿತ್ತು.
ಶಕ್ತಿ ದೇವಿಯಾದ ದಂಡಿಯಮ್ಮ ದೇವಿ ಕಲ್ಲಿನ ಉದ್ಭವಮೂರ್ತಿಯಾಗಿ ಮೂಡಿದ್ದು ದೇವಿಯನ್ನು ವಿಗ್ರಹ ರೂಪದಲ್ಲಿ ನಿರ್ಮಿಸಲು ದೇವಿಯ ಅಪ್ಪಣೆ, ಅರ್ಚಕರ ಪ್ರಶ್ನಾಶಾಸ್ತ್ರದಲ್ಲಿ ಕೇಳಿ ಬಂದಿತ್ತು. ಒಬ್ಬ ಭಕ್ತೆಯ ಮೇಲೆ ದೇವಿ ಅವಾಹನೆಯಾಗಿ ಗುಡಿ ನಿರ್ಮಾಣ ಮಾಡಿ ಉತ್ಸವ, ಮೆರವಣಿಗೆ ನಡೆಸಲು ಅಪ್ಪಣೆ ನೀಡಿತ್ತು.
10 ವರ್ಷಗಳ ಹಿಂದಿನಿಂದಲೂ ದೇವಿಯ ಉತ್ಸವ ಮಾಡುವ ಮೊದಲು ಗ್ರಾಮದಲ್ಲಿರುವ ಹೇಮಾವತಿ ಹಳೇ ನಾಲೆಯಲ್ಲಿ ದೇವಿ ಉತ್ಸವಮೂರ್ತಿ ತೊಳೆದು ಪುಣ್ಯಾಹದಂತಹ ಕಾರ್ಯ, ಪೂರ್ಣಕುಂಭಕ್ಕೆ ದೇವಿ ಅವಾಹನೆ ಮಾಡಿ ಮಹಿಳೆಯರಿಗೆ ತಲೆ ಮೇಲೆ ಹೊರಿಸಿಕೊಂಡು ಮೆರವಣಿಗೆ ಮಾಡಲಾಗುತ್ತಿತ್ತು. ದೇವಿಯ ಕಳಸ ಮೆರವಣಿಗೆಯಲ್ಲಿ ಸಾಗದೆ ಬೀಳುತ್ತಿತ್ತು. ದೇವಿ ಗುಡಿಯಲ್ಲಿ ಹೂವಿನ ಪ್ರಸಾದ ಕೇಳಿದರೆ ಅಶುಭವಾಗುತ್ತಿತ್ತು. ಇಂತಹ ನೂರೆಂಟು ವಿಘ್ನಗಳಿಂದ ಗ್ರಾಮಸ್ಥರು ಬೇಸತ್ತಿದ್ದರು.
ಅಂತಿಮವಾಗಿ ಒಬ್ಬ ಮಹಿಳೆ ಮೇಲೆ ದೇವಿ ಅವಾಹನೆಯಾಗಿ ದೇಗುಲ ಉದ್ಘಾಟನೆಯಾದ 12ನೇ ದಿನಕ್ಕೆ ಕಪ್ಪು ಮೇಕೆ ಬಲಿ ಅರ್ಪಿಸಲು ತಿಳಿಸಲಾಗಿದೆ. ಅದರಂತೆ ನ.18ರಿಂದ ದೇಗುಲ ಮರುಸ್ಥಾಪನೆ, ಹೋಮ ಹವನಾದಿ ಕಾರ್ಯಕ್ರಮಗಳು ಗ್ರಾಮದಲ್ಲಿ ನಡೆಯುತ್ತಿತ್ತು. ಒಂದೆರಡು ದಿನಗಳಲ್ಲಿ ಕಾರ್ಯಕ್ರಮ ಸಮಾಪ್ತಿಯಾಗಿ ದೇವಿ ಅಣತಿಯಂತೆ ಕಪ್ಪು ಮೇಕೆ ಬಲಿ ನೀಡಲು ಗ್ರಾಮಸ್ಥರು ಸಜ್ಜಾಗಿದ್ದರು.
ಈ ಹರಕೆಯನ್ನು ದೇವಿಗೆ ಒಪ್ಪಿಸುವ ಮೊದಲು 9ನೇ ದಿನವಾದ ಗುರುವಾರ ತಡರಾತ್ರಿಯಲ್ಲಿ ಕಿಡಿಗೇಡಿಗಳು ಕೋಣವನ್ನು ಕಡಿದು ರುಂಡ-ಮುಂಡ ಬೇರ್ಪಡಿಸಲಾಗಿದೆ. ಹೇಮಾವತಿ ಹಳೆ ನಾಲೆ ಬಳಿ ಕೋಣ ಕಡಿದು ಮುಂಡ(ದೇಹ) ಗದ್ದೆಹಳ್ಳಕ್ಕೆ ಬಿಸಾಡಿ, ರುಂಡ ಒತ್ತುಕೊಂಡು ಹೋಗಲಾಗಿದೆ. ಈ ಸ್ಥಳದಲ್ಲಿ ಜತೆಗೆ ಅರಿಶಿಣ, ಕುಂಕುಮ, ಕುಡಿಕೆ, ರಕ್ತ, ವಾಮಾಚಾರಕ್ಕೆ ಬೇಕಾದ ರಂಗೋಲಿಯಂತಹ ವಿವಿಧ ವಸ್ತು ಬಿಸಾಡಲಾಗಿದೆ.
ಶುಕ್ರವಾರ ರೈತರು ಜಮೀನಿಗೆ ತೆರಳುವಾಗ ಈ ಘಟನೆ ಕಂಡು ಬೆಚ್ಚಿ ಬಿದ್ದಿದ್ದಾರೆ. ವಿಷಯವನ್ನು ಗ್ರಾಮಸ್ಥರಿಗೆ ಮುಟ್ಟಿಸಿದ್ದಾರೆ.
ಯಾರೋ ಕಿಡಿಗೇಡಿಗಳು ಕೃತ್ಯ ನಡೆಸಲಾಗಿದೆ ಎಂದು ಅರ್ಚಕರಲ್ಲಿ ಪರಿಹಾರ ಕೇಳಿದಾಗ ದೇವಿ ಮರು ಪ್ರತಿಷ್ಠಾಪನೆಗೆ ಹೋಮ, ಹವನಾದಿಗಳು ಕಟ್ಟುನಿಟ್ಟಿನಲ್ಲಿ ಮತ್ತೊಮ್ಮೆ ನಡೆಯಬೇಕಿದೆ ಎಂದು ತಿಳಿಸಲಾಗಿದೆ. ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿ ಕಿಡಿಗೇಡಿ ಪತ್ತೆಗಾಗಿ ಕಿಕ್ಕೇರಿ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ.
ಅಣ್ಣೇಗೌಡ, ತೋಪೇಗೌಡ, ರವಿ, ಸತೀಶ್, ಮಹದೇವು, ಮಂಜೇಗೌಡ, ನಂಜೇಗೌಡ, ವೆಂಕಟೇಶ್, ಅಪ್ಪಣ್ಣಿ, ಬಸವರಾಜು ಮತ್ತಿತರರಿದ್ದರು.