ಮದ್ದೂರು ನಗರದ ಡಾ.ಎಚ್.ಕೆ.ಮರಿಯಪ್ಪ ಕಾನ್ವೆಂಟಿನಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆಯಡಿ ಎಚ್.ಕೆ.ವೀರಣ್ಣಗೌಡರ ಮಡದಿ ತಾಯಮ್ಮ ವೀರಣ್ಣಗೌಡರ ಹೆಸರಿನಲ್ಲಿ ನೂತನವಾಗಿ ಪ್ರಾರಂಭವಾದ ತಾಯಿ ನೆಸ್ಟ್ ಶಿಶುವಿಹಾರಕ್ಕೆ ಹಿರಿಯ ಸ್ವಾತಂತ್ರ ಹೋರಾಟಗಾರ ಕೆ.ಟಿ.ಚಂದು ಚಾಲನೆ ನೀಡಿದರು. ಧನಂಜಯ, ಸಿ.ಅಪೂರ್ವಚಂದ್ರ, ಎಂ.ಸ್ವರೂಪ್‌ಚಂದ್, ಪ್ರೊ.ಮಲ್ಲಿಕಾರ್ಜುನ್, ಕವಿತಾ, ಯು.ಎಸ್.ಶಿವಕುಮಾರ್, ಎಸ್.ಪಿ.ಕಿರಣ್ ಇದ್ದರು.
ಮದ್ದೂರು: ಮಕ್ಕಳಿಗೆ ಕೇವಲ ಪುಸ್ತಕ ಮತ್ತು ಅಂಕಗಳಿಗೆ ಸೀಮಿತವಾದ ಶಿಕ್ಷಣ ನೀಡದೆ ಉತ್ತಮ ವ್ಯಕ್ತಿತ್ವ, ಯೋಜನಾ ಶಕ್ತಿ ಮತ್ತು ಜೀವನ ಕೌಶಲಗಳನ್ನು ಬೆಳೆಸುವಂತಹ ಶಿಕ್ಷಣವನ್ನು ನೀಡಬೇಕೆಂದು ಹಿರಿಯ ಸ್ವಾತಂತ್ರ ಹೋರಾಟಗಾರ ಕೆ.ಟಿ.ಚಂದು ಹೇಳಿದರು.
ನಗರದ ಡಾ.ಎಚ್.ಕೆ. ಮರಿಯಪ್ಪ ಕಾನ್ವೆಂಟಿನಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆಯಡಿ ಎಚ್.ಕೆ.ವೀರಣ್ಣಗೌಡರ ಮಡದಿ ತಾಯಮ್ಮ ವೀರಣ್ಣಗೌಡರ ಹೆಸರಿನಲ್ಲಿ ನೂತನವಾಗಿ ಪ್ರಾರಂಭವಾದ ತಾಯಿ ನೆಸ್ಟ್ ಶಿಶುವಿಹಾರಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಶೈಕ್ಷಣಿಕ ಜ್ಞಾನದಷ್ಟೇ, ಮೌಲ್ಯ ಶಿಕ್ಷಣವು ಅಗತ್ಯವಾಗಿದ್ದು ಒಳ್ಳೆಯ ನಡತೆ ಮತ್ತು ಮಾನವೀಯತೆಯನ್ನು ಬೆಳೆಸುವಂತಹ ಪರಿಸರದೊಂದಿಗೆ ಶಿಕ್ಷಣವನ್ನು ನೀಡುವುದು ಅನಿವಾರ್ಯವಾಗಿದೆ ಎಂದರು.
ಬಾಲ್ಯದಿಂದಲೇ ಮಕ್ಕಳಲ್ಲಿ ಪ್ರಾಮಾಣಿಕತೆ, ದಯೆ, ಸಹಾನುಭೂತಿ ಮತ್ತು ಗೌರವದಂತಹ ಗುಣಗಳನ್ನು ಬೆಳೆಸುವುದು ಶಿಕ್ಷಣದ ಮುಖ್ಯ ಉದ್ದೇಶವಾದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಶಿಸ್ತು, ನೈತಿಕತೆ ಬೆಳೆದು ಸಾಮಾಜಿಕ ಜವಾಬ್ದಾರಿಗಳನ್ನು ಮೈಗೂಡಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ್ ಮಾತನಾಡಿ, ಆಧುನಿಕ ಒತ್ತಡದ ಜೀವನದಿಂದಾಗಿ ಪಾಲಕರು ಮಕ್ಕಳ ಸಾಮಾಜಿಕ ಜೀವನದ ಕಡೆಗೆ ಗಮನ ಕೊಡುವುದು ಕಡಿಮೆಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶಿಕ್ಷಕರು ಕಲಿಕೆಯ ಜತೆಯಲ್ಲಿ ಮಕ್ಕಳು ಕೋಪ, ಭಯ, ಒತ್ತಡದಂತ ಭಾವನೆಗಳನ್ನು ಸಮರ್ಥವಾಗಿ ನಿಭಾಯಿಸುವಂತಹ ಮನೋಭಾವವನ್ನು ಬೆಳೆಸುವ ಜತೆಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸುವ ಜವಾಬ್ದಾರಿ ಇದೆ ಎಂದರು.
ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿ.ಟಿ.ಹೇಮಾವತಿ ಹಾಗೂ ಬಿಇಒ ಧನಂಜಯ ಅವರನ್ನು ಸಂಸ್ಥೆಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಸ್ವರೂಪ ಚಂದ್, ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ನಿರ್ದೇಶಕ ಪ್ರೊ.ಮಲ್ಲಿಕಾರ್ಜುನ್, ಶಾಂತಾ ಚಂದು, ಕವಿತಾ ಅಪೂರ್ವ ಚಂದು, ಪ್ರಾಂಶುಪಾಲರಾದ ಯು.ಎಸ್.ಶಿವಕುಮಾರ್, ಎಸ್.ಪಿ. ಕಿರಣ್, ಮುಖ್ಯ ಶಿಕ್ಷಕರಾದ ಎನ್.ಕೃಷ್ಣ, ಎಂ.ಟಿ.ಚಂದ್ರಶೇಖರ್, ವರದರಾಜು, ಆಡಳಿತ ಅಧಿಕಾರಿ ಯು.ಎಸ್. ರವಿ, ಹರೀಶ, ಚೆನ್ನಪ್ಪ ಸೇರಿದಂತೆ ಇತರರು ಹಾಜರಿದ್ದರು.