- ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ರಸ್ತೆ ದಾಟುತ್ತಿದ್ದಾಗ
- ಬೈಕ್ ಡಿಕ್ಕಿ ಹೊಡೆದು
- ತೀವ್ರ ಗಾಯಗೊಂಡಿದ್ದ ಬಾಲಕಿ
ಹಲಗೂರು: ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾಳೆ.
ದಳವಾಯಿ ಕೋಡಿಹಳ್ಳಿ ಗ್ರಾಮದ ನವೀನ್‌ಕುಮಾರ್ ಅವರ ಪುತ್ರಿ ದೀಕ್ಷಿತಾ (8) ಮೃತ ಬಾಲಕಿ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ನೇ ತರಗತಿ ವ್ಯಾಸಂಗ ಮಾಡುತ್ತಿರುವ ದೀಕ್ಷಿತಾ ಡಿ.3ರಂದು ಶಾಲೆ ಮುಗಿಸಿ ಮನೆಗೆ ಮರಳಲು ರಸ್ತೆ ದಾಟುತ್ತಿದ್ದಳು. ಈ ವೇಳೆ ಹಲಗೂರು ಕಡೆಯಿಂದ ಕನಕಪುರ ಕಡೆಗೆ ತೆರಳುತ್ತಿದ್ದ ಮೋಟಾರ್ ಬೈಕ್ ಡಿಕ್ಕಿ ಹೊಡೆದಿತ್ತು. ಇದರಿಂದ ಗಾಯಗೊಂಡಿದ್ದ ದೀಕ್ಷಿತಾಳನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.