ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿಗೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ದನಗಳ ಜಾತ್ರೆ ನಡೆಯುವ ಸ್ಥಳವನ್ನು ಪರಿಶೀಲಸಿದರು.
- ಇತಿಹಾಸ ಪ್ರಸಿದ್ಧ ಶ್ರೀ ಗವಿರಂಗನಾಥಸ್ವಾಮಿ ದನಗಳ ಜಾತ್ರೆ
- ಜ.15 ರಿಂದ 19 ರವರೆಗೆ
ಕೆ.ಆರ್.ಪೇಟೆ: ಇತಿಹಾಸ ಪ್ರಸಿದ್ಧ ಶ್ರೀ ಗವಿರಂಗನಾಥಸ್ವಾಮಿ ದನಗಳ ಜಾತ್ರೆ ಜ.15 ರಿಂದ 19 ರವರೆಗೆ ನಡೆಯಲಿದ್ದು, ಮೂಲ ಸೌಕರ್ಯ ಒದಗಿಸುವಂತೆ ಶಾಸಕ ಎಚ್.ಟಿ.ಮಂಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿಯಲ್ಲಿ ನಡೆಯಲಿರುವ ಶ್ರೀ ಗವಿರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆ ನಡೆಯುವ ಸ್ಥಳವನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದರು. ದನಗಳ ಜಾತ್ರೆ ಹಾಗೂ ರಥಸಪ್ತಮಿ ನಡೆಯಲಿದ್ದು, ದನಕರುಗಳು ಹಾಗೂ ರಥೋತ್ಸವಕ್ಕೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಬೇಕು ಎಂದರು.
ಹೊರಜಿಲ್ಲೆ, ಹೊರ ತಾಲೂಕುಗಳಿಂದ ದನಕರುಗಳು, ಸಾರ್ವಜನಿಕರು ಇಲ್ಲಿಗೆ ಆಗಮಿಸಲಿದ್ದು, ಕುಡಿಯುವ ನೀರು, ರಸ್ತೆ, ಬೀದಿದೀಪ, ಸೇರಿದಂತೆ ಎಲ್ಲ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು. ತುರ್ತಾಗಿ ಆಗಬೇಕಾಗಿರುವ ಕೆಲಸಗಳನ್ನು ಇಂದಿನಿಂದಲೇ ಕೈಗೊಳ್ಳಬೇಕು ಎಂದು ತಹಸೀಲ್ದಾರ್, ತಾಪಂ ಇಒ ಸೇರಿದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರು ಹಾಗೂ ತಾಲೂಕಿನ ಗವಿರಂಗನಾಥಸ್ವಾಮಿ ಭಕ್ತರು ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ತಹಸೀಲ್ದಾರ್ ಡಾ.ಎಸ್.ಯು ಅಶೋಕ್, ತಾಪಂ ಇಒ ಸುಷ್ಮಾ, ಟಿಎಪಿಸಿಎಂಎಸ್ ನಿರ್ದೇಶಕ ಮೋಹನ್, ರವಿಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.