ಡಿ.ಹಲಸಹಳ್ಳಿ ಸಮೀಪದ ಗವಿಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಗಂಗಾ ಸ್ವಾಮೀಜಿ, ಗವಿ ಮಠದ ಶ್ರೀ ಷಡಕ್ಷರ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಮತ್ತು ಗ್ರಾಮಸ್ಥರು ಹಾಜರಿದ್ದರು.  
ಮಂಡ್ಯ

ಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಬೇಕು

ಎ. ಆರ್. ರಘುರಾಮ
ಹಲಗೂರು: ಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಬೇಕು ಎಂದು ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಡಿ.ಹಲಸಹಳ್ಳಿ ಗ್ರಾಮದ ಸಮೀಪದ ಗವಿಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವೇಶ್ವರ ಸ್ವಾಮಿಯ ವಿಶೇಷವಾಗಿ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭಕ್ತರೊಂದಿಗಿನ ಉತ್ತಮ ಬಾಂಧವ್ಯ ಮತ್ತು ಸಹಕಾರದಿಂದ ಗವಿಮಠ ಅಭಿವೃದ್ಧಿಯಾಗಿದೆ. ಈ ನಿಟ್ಟಿನಲ್ಲಿ ಮಠಾಧ್ಯಕ್ಷರಾದ ಶ್ರೀ ಷಡಕ್ಷರ ಸ್ವಾಮೀಜಿ ಸೇವೆ ದೊಡ್ಡದು ಎಂದರು.
ಮಠದ ರಾಜಗೋಪುರ ಕಳಶಾರೋಹಣವಾದ 48ನೇ ದಿನದ ಅಂಗವಾಗಿ ಬಸವೇಶ್ವರ ಸ್ವಾಮಿಯ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ನೆರವೇರಿದೆ. ಮಠಕ್ಕೆ ಹೊಸರೂಪ ಬಂದಿದೆ. ಭಕ್ತರು ಯಾವುದೇ ಶುಭ ಕಾರ್ಯಗಳನ್ನು ಮಾಡಲು ಎಲ್ಲ ವ್ಯವಸ್ಥೆಗಳೂ ಇವೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಂದ ಮಠದ ಶೋಭೆ ಇನ್ನಷ್ಟು
ಹೆಚ್ಚಾಗಲಿ ಎಂದವರು ಆಶಿಸಿದರು.
ಈ ಸ್ಥಳವು ಕವಿ ಷಡಕ್ಷರ ದೇವನ ತಪೋಭೂಮಿ. ರಾಜಶೇಖರ ವಿಲಾಸ ಎಂಬ ಗ್ರಂಥವನ್ನು ಬರೆದ ಸ್ಥಳವಾಗಿ ಖ್ಯಾತಿ ಪಡೆದಿದೆ. ಹಲವಾರು ಪುಣ್ಯ ಪುರುಷರ ಇಲ್ಲಿ ಜನಿಸಿದ್ದಾರೆ. ಸ್ಥಳ ಮಹಿಮೆ ಪಾಲನೆಯು ಗ್ರಾಮಸ್ಥರ ಮತ್ತು ಮಠದ ಜವಾಬ್ದಾರಿಯಾಗಿದೆ ಎಂದವರು ಹೇಳಿದರು. ನಾನು ಚಿಕ್ಕವನಿದ್ದಾಗಿನಿಂದಲೂ ಈ ಮಠಕ್ಕೆ ಬರುತ್ತಿದ್ದೆ. ಇಂದಿನವರೆಗೂ ಅವಿನಾಭಾವ ಸಂಬಂಧವಿದೆ. ಉಭಯ ಮಠಗಳ ನಡುವಿನ ಬಾಂಧವ್ಯ ಹೀಗೆಯೇ ಮುಂದುವರಿಯಲಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಗವಿಮಠದ ಶ್ರೀ ಷಡಕ್ಷರ ಸ್ವಾಮೀಜಿಯವರು ಸಿದ್ದಲಿಂಗ ಸ್ವಾಮೀಜಿಯವರಿಗೆ ಪಾದಪೂಜೆ ನೆರವೇರಿಸಿದರು. ನೂರಾರು ಭಕ್ತರು ಆಶೀರ್ವಾದ ಪಡೆದರು. ಎಲ್ಲರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು. ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಡಾ.ಚನ್ನಬಸವ ಸ್ವಾಮೀಜಿ, ಆಂಗ್ರಾಪುರದ ಶ್ರೀ ಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ, ಹೊಸಹಳ್ಳಿ ಮಠದ ಶ್ರೀ ಓಂಕಾರ ಸ್ವಾಮೀಜಿ, ಮೇದಿನಿ ಮಠದ ಶ್ರೀ ಶಿವಲಿಂಗ ಸ್ವಾಮೀಜಿ, ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.