ಪಾಂಡವಪುರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವೀಕ್ಷಕರಾಗಿ ಆಗಮಿಸಿದ್ದ ಎಐಸಿಸಿ ಕಾರ್ಯದರ್ಶಿ ಸೈಮನ್ ಅಲೆಕ್ಸ್ ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ಪಕ್ಷದ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದರು. ಗೋಪಿಕೃಷ್ಣ, ಮಂಜುಳಾ ನಾಯ್ಡು ಇತರರಿದ್ದರು.
- ಪಕ್ಷದ ಸದಸ್ಯರು, ಕಾರ್ಯಕರ್ತರು,ಬೆಂಬಲಿಗರ ಸಭೆ
ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಮತ್ತು ಕೆಪಿಸಿಸಿ ವೀಕ್ಷಕರು ಮೇಲುಕೋಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷದ ಸದಸ್ಯರು, ಕಾರ್ಯಕರ್ತರು ಮತ್ತು ಬೆಂಬಲಿಗರ ಸಭೆ ನಡೆಸಿ ಶುಕ್ರವಾರ ಅಭಿಪ್ರಾಯ ಸಂಗ್ರಹಿಸಿದರು.
ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಪಾಂಡವಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಸಂಘಟನಾ ಸೃಜನ ಅಭಿಯಾನದಲ್ಲಿ ಎಐಸಿಸಿ ಕಾರ್ಯದರ್ಶಿ, ವೀಕ್ಷಕ ಸೈಮನ್ ಅಲೆಕ್ಸ್ ಅಭಿಪ್ರಾಯ ಸಂಗ್ರಹಿಸಿದರು.
ಈ ವೇಳೆ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ವೀಕ್ಷಕ ಸೈಮನ್ ಅಲೆಕ್ಸ್, ಇದು ಚುನಾವಣೆಯಲ್ಲ ಆಯ್ಕೆ. ಜಿಲ್ಲಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ತಳಮಟ್ಟದ ಕಾರ್ಯಕರ್ತರು ಹಾಗೂ ಬೆಂಬಲಿಗರ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಎಐಸಿಸಿಗೆ ಕಳುಹಿಸಿಕೊಡಲಾಗುವುದು. ಪಕ್ಷದ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯವನ್ನು ಪರಿಗಣಿಸಿ ಎಐಸಿಸಿಯು ಜಿಲ್ಲಾಧ್ಯಕ್ಷರ ಅಯ್ಕೆಯನ್ನು ಪ್ರಕಟಿಸಲಿದೆ. 6 ಮಂದಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿತರಾಗಿದ್ದಾರೆ. ಈ ಪೈಕಿ ಇಬ್ಬರು ಸಾಮಾನ್ಯ, ಒಬ್ಬ ಮಹಿಳೆ, ಒಬ್ಬ ಬಿಸಿಎಂ, ಒಬ್ಬ ಅಲ್ಪಸಂಖ್ಯಾತ ಹಾಗೂ ಒಬ್ಬ ಪರಿಶಿಷ್ಠ ವರ್ಗದವರು ಆಕಾಂಕ್ಷಿತರಾಗಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಹಾಗೂ ವೀಕ್ಷಕರಾದ ಗೋಪಿಕೃಷ್ಣ, ಮಂಜುಳಾ ನಾಯ್ಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಕೆಪಿಸಿಸಿ ಸದಸ್ಯ ಬಿ.ರೇವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಜಿಲ್ಲಾಧ್ಯಕ್ಷ ಆಕಾಂಕ್ಷಿಗಳಾದ ಸಿ.ಎಂ.ದ್ಯಾವಪ್ಪ, ಚಿದಂಬರ್ ಸೇರಿದಂತೆ ಇತರರು ಇದ್ದರು.