ಮಂಡ್ಯದಲ್ಲಿ ಆಯೋಜಿಸಿದ್ದ ಗಮಕ ವ್ಯಾಖ್ಯಾನ ಕಾರ್ಯಕ್ರಮವನ್ನು ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ.ಸುಜಾತಾಕೃಷ್ಣ ಉದ್ಘಾಟಿಸಿದರು.
- ಗಮಕಿ ಕಲಾಶ್ರೀ ಸಿ.ಪಿ.ವಿದ್ಯಾಶಂಕರ್ ವಾಚಿಸಿದರೆ, ಡಾ.ಎಸ್.ಶ್ರೀನಿವಾಸಶೆಟ್ಟಿ ಆಕರ್ಷಕವಾಗಿ ವ್ಯಾಖ್ಯಾನ
- ಕರ್ನಾಟಕ ಗಮಕ ಕಲಾ ಪರಿಷತ್‌ನಿಂದ ಆಯೋಜನೆ
ಮಂಡ್ಯ: ನಗರದ ಡ್ಯಾಫೋಡಿಲ್ಸ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಗಮಕ ವ್ಯಾಖ್ಯಾನ ಕಾರ್ಯಕ್ರಮ ವಿದ್ಯಾರ್ಥಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು ಮತ್ತು ಮಂಡ್ಯ ಜಿಲ್ಲಾ ಘಟಕ ಹಾಗೂ ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಗಮಕ ಕಾರ್ಯಕ್ರಮದಲ್ಲಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಹಾಗೂ 10ನೇ ತರಗತಿಯ ಕಾವ್ಯ ಭಾಗ ವೀರಲವವನ್ನು ಹಿರಿಯ ಗಮಕಿ ಕಲಾಶ್ರೀ ಸಿ.ಪಿ.ವಿದ್ಯಾಶಂಕರ್ ವಾಚಿಸಿದರೆ, ವ್ಯಾಖ್ಯಾನಕಾರ ಡಾ.ಎಸ್.ಶ್ರೀನಿವಾಸಶೆಟ್ಟಿ ಆಕರ್ಷಕವಾಗಿ ವ್ಯಾಖ್ಯಾನಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ.ಸುಜಾತಾಕೃಷ್ಣ, ಪ್ರಾಚೀನ ಪಾರಂಪರಿಕ ಕಲೆ ಯಾದ ಗಮಕಕ್ಕೆ 3 ಸಾವಿರ ವರ್ಷದ ಭವ್ಯ ಇತಿಹಾಸವಿದೆ. ತೇತ್ರಾಯುಗದಿಂದ ಅರಳಿದ ಶ್ರೇಷ್ಟ ಗಮಕ ಕಲೆ ಕನ್ನಡ ಭಾಷೆಯ ಅಸ್ಮಿತೆಯಾಗಿದೆ. ಕಲೆಯ ಪ್ರಸಾರಕ್ಕೆ ಪೂರಕವಾಗಿ ಶಿಕ್ಷಣ ಸಂಸ್ಥೆ ಇಂತಹ ವಿಶಿಷ್ಟ ಕಾರ್ಯಕ್ರಮಕ್ಕೆ ಸದಾ ಬೆಂಬಲವಾಗಿರುತ್ತದೆ ಎಂದರು.
ಎಲ್ಲರೂಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪ್ರಾರಂಭದ ದಿನಗಳಲ್ಲಿಯೇ ಮಹಾ ಕಾವ್ಯಗಳ ಬಗ್ಗೆ ಅರಿವು, ಅಭಿಮಾನ ಹೊಂದುವುದು ಅಗತ್ಯ. ಇದು ಅವರ ಜೀವನವನ್ನು ಸುಭದ್ರಗೊಳಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ಮಾತನಾಡಿದರು. ಶಾಲೆಯ ಮುಖ್ಯಶಿಕ್ಷಕಿ ನಯನಾ ಇದ್ದರು.