ಚಂದೂಪುರ ಗ್ರಾಮದಲ್ಲಿ ಆಶಯ್ ಮಧು ಜಿ.ಮಾದೇಗೌಡರ ಅಭಿಮಾನಿಗಳ ಬಳಗ ಆಯೋಜಿಸಿದ್ದ ಆರೋಗ್ಯ ಶಿಬಿರವನ್ನು ಕೆಂಗೇರಿಯ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಎಂಎಲ್‌ಸಿ ಮಧು ಜಿ. ಮಾದೇಗೌಡ, ಆಶಯ್ ಮಾದೇಗೌಡ ಇತರರು ಇದ್ದರು. 
ಮಂಡ್ಯ

ಗ್ರಾಮೀಣ ಭಾಗದ ಮಕ್ಕಳ ಆಶಾಕಿರಣ ಜಿ.ಮಾದೇಗೌಡ

ಪ್ರಮುಖ ಮುಖ್ಯಾಂಶಗಳು

  • G. Madegowda
ಕೆ.ಎಂ.ದೊಡ್ಡಿ: ರೈತ ಹೋರಾಟಗಾರ, ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರು ಹಾಕಿ ಕೊಟ್ಟ ಮಾರ್ಗದಲ್ಲಿ ಜನಪರ ಸೇವೆ, ಸಾಮಾಜಿಕ ಕಾರ್ಯವನ್ನು ಅವರ ಪುತ್ರ ಎಂಎಲ್ಸಿ ಮಧು ಜಿ.ಮಾದೇಗೌಡ ಯಶಸ್ವಿಯಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಶ್ಲಾಘಿಸಿದರು.
ಸಮೀಪದ ಚಂದೂಪುರ ಗ್ರಾಮದಲ್ಲಿ ಆಶಯ್ ಮಧು ಜಿ.ಮಾದೇಗೌಡರ ಅಭಿಮಾನಿಗಳ ಬಳಗ, ಭಾರತಿ ಹೆಲ್ತ್ ಸೈನ್ಸ್ ಕಾಲೇಜುಗಳು, ಅಸ್ಟರ್ ಜಿ.ಮಾದೇಗೌಡ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಚಂದೂಪುರ ಸಹಯೋಗದೊಂದಿಗೆ ಭಾರತೀ ವಿದ್ಯಾಸಂಸ್ಥೆ ಸಿಇಒ ಹಾಗೂ ಯುವ ಮುಖಂಡ ಅಶಯ್ ಮಧು ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜಿ.ಮಾದೇಗೌಡರು ಗ್ರಾಮೀಣ ಭಾಗದ ಮಕ್ಕಳು ಜ್ಞಾನವಂತರಾಗಲು ವಿದ್ಯಾಸಂಸ್ಥೆಗಳನ್ನು ತೆರೆದು ಲಕ್ಷಾಂತರ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾದರು. ಆಸ್ಪತ್ರೆಗಳನ್ನು ತೆರೆದು ಬಡವರಿಗೆ ಆರೋಗ್ಯ ಸೇವೆ ಒದಗಿಸಿದರು. ಅವರ ಹಾಗೂ ಮಧು ಜಿ.ಮಾದೇಗೌಡರ ಹಾದಿಯಲ್ಲಿ ಅವರ ಸುಪುತ್ರ ಆಶಯ್ ಮಧು ಸಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ನಮ್ಮ ತಂದೆ ಜಿಲ್ಲೆಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ಸಾಗುವ ಮೂಲಕ ಗ್ರಾಮೀಣ ಭಾಗದ ಬಡ ಮಧ್ಯಮ ವರ್ಗದವರಿಗೆ ಉತ್ತಮ ಶಿಕ್ಷಣ, ವೈದ್ಯಕೀಯ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು.
2004 ರಿಂದ ನಿರಂತರವಾಗಿ ಸಂಸ್ಥೆ ವತಿಯಿಂದ ಬಿಜಿಎಸ್ ಆಸ್ಪತ್ರೆ ವೈದ್ಯರ ಸಹಕಾರದಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರ ನಡೆಸಿಕೊಂಡು ಬರಲಾಗುತ್ತಿದೆ. ಲಕ್ಷಾಂತರ ಜನರಿಗೆ ಆರೋಗ್ಯ ಸೇವೆ ಮೂಲಕ ರೋಗಿಗಳ ತಪಾಸಣೆ ನಡೆಸಿ, ಚಿಕಿತ್ಸೆ, ಔಷಧಿ ವಿತರಣೆ, ಶಸ್ತ್ರ ಚಿಕಿತ್ಸಾ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಭಾರತೀ ವಿದ್ಯಾಸಂಸ್ಥೆ ಸಿಇಒ ಅಶಯ್ ಮಧು ಮಾತನಾಡಿ, ಮದ್ದೂರು ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕಿರುಗಾವಲು ಭಾಗದಲ್ಲಿ ನಮ್ಮ ತಾತ ಜಿ.ಮಾದೇಗೌಡರು ಕೈಗಾರಿಕೆ, ಶಿಕ್ಷಣ, ಆರೋಗ್ಯ ಸೇವೆಗಳನ್ನು ಜನರಿಗೆ ಒದಗಿಸಿ ಆರ್ಥಿಕವಾಗಿ ಪ್ರಬಲರಾಗಲು ಶ್ರಮಿಸಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಅಧಿಕಾರ ಇರಲಿ, ಇಲ್ಲದಿರಲಿ ಸೇವಾ ಮನೋಭಾವ ರೂಢಿಸಿಕೊಂಡು ತಂದೆಯೊಂದಿಗೆ ಜನರೊಂದಿಗೆ ಇದ್ದು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಚಂದೂಪುರ ರೇಣುಕಾ ಆಶ್ರಮ ಮಠದ ಶ್ರೀಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತಾಲೂಕು ಆರೋಗ್ಯಧಿಕಾರಿ ಡಾ. ರವಿಶಂಕರ್, ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಅಭಿಯಂತರ ಹಾಗಲಹಳ್ಳಿ ಬಸವರಾಜೇಗೌಡ, ಅಸ್ಟರ್ ಜಿ.ಮಾದೇಗೌಡ ಆಸ್ಪತ್ರೆಯ ಯೂನಿಟ್ ಹೆಡ್ ಗಣೇಶ್ ಪ್ರಭು, ಭಾರತೀ ಹೆಲ್ತ್ ಸೈನ್ಸ್ಸ್ ನಿರ್ದೇಶಕ ಡಾ.ತಮಿಜ್ ಮಣಿ, ಚಂದೂಪುರ ಡಿ.ಕೆ.ಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಚಂದೂಪುರ ಶಿವಲಿಂಗೇಗೌಡ ಸೇರಿದಂತೆ ಮತ್ತಿತರಿದ್ದರು.