ಪಾಂಡವಪುರ ಪಟ್ಟಣದ ಹೊರವಲಯದಲ್ಲಿ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ರೈತರಿಂದ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಪುರಸಭೆ ಮತ್ತು ಉಪವಿಭಾಗಾಧಿಕಾರಿ ಕಚೇರಿ ಪಿಠೋಪಕರಣಗಳನ್ನು ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದರು.
ಪಾಂಡವಪುರ: ಪಟ್ಟಣದ ಒಳಚರಂಡಿ ಮಲೀನ ನೀರಿನ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಜಮೀನು ನೀಡಿದ್ದ ರೈತರಿಗೆ ಪರಿಹಾರ ನೀಡದ ಕಾರಣ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಕೋರ್ಟ್ ಸಿಬ್ಬಂದಿ ಪುರಸಭೆ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಯ ಕಂಪ್ಯೂಟರ್ ಸೇರಿದಂತೆ ಪೀಠೋಪಕರಣಗಳನ್ನು ಶುಕ್ರವಾರ ಜಪ್ತಿ ಮಾಡಿದರು.
ನ್ಯಾಯಾಲಯದ ಸಿಬ್ಬಂದಿ ವಕೀಲ ಸಿ.ನಿರಂಜನ್ ನೇತೃತ್ವದಲ್ಲಿ ಮೊದಲು ಪುರಸಭೆ ಕಚೇರಿಗೆ ತೆರಳಿ, ಪುರಸಭೆ ಮುಖ್ಯಾಧಿಕಾರಿ ಕೊಠಡಿಯ ಪಿಠೋಪಕರಣ, ಕಂಪ್ಯೂಟರ್, ಪ್ರಿಂಟರ್, ಚೇರ್‌ಗಳು ಸೇರಿದಂತೆ ಇತರರೆ ವಸ್ತುಗಳನ್ನು ಜಪ್ತಿ ಮಾಡಿ, ನ್ಯಾಯಾಲಯದ ವಶಕ್ಕೆ ಒಪ್ಪಿಸಿದರು. ಬಳಿಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಕಂಪ್ಯೂಟರ್, ಪ್ರಿಂಟರ್, ಟೇಬಲ್, ಕುರ್ಚಿಗಳು ಸೇರಿದಂತೆ ಹಲವು ಪೀಠೋಪಕರಣಗಳನ್ನು ಜಪ್ತಿ ಮಾಡಿದರು.
ಈ ವೇಳೆ ರೈತಪರ ವಕೀಲ ಸಿ.ನಿರಂಜನ್ ಮಾತನಾಡಿ, ಪಟ್ಟಣದಲ್ಲಿ ಒಳಚರಂಡಿ ಮಲೀನ ನೀರಿನ ಸಂಸ್ಕರಣಾ ಘಟಕಕ್ಕೆ ರೈತರಾದ ಜಯಮ್ಮ ಹಾಗೂ ಅವರ ಮಕ್ಕಳಾದ ಸಂತೋಷ್ ಮತ್ತು ದೀಪು ಅವರ 14 ಗುಂಟೆ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ಅಲ್ಪ ಮೊತ್ತದ ಪರಿಹಾರ ಘೋಷಣೆ ಮಾಡಿತ್ತು.
ಇದನ್ನ ಒಪ್ಪದ ರೈತರು ಹೆಚ್ಚಿನ ಪರಿಹಾರಕ್ಕಾಗಿ ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು 3 ಕೋಟಿ ರೂ.ಪರಿಹಾರ ನೀಡಬೇಕು ಎಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪುರಸಭೆಯು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ವಜಾ ಮಾಡಿದ ಹೈಕೋರ್ಟ್ ರೈತರ ಪರ ವಾದವನ್ನು ಎತ್ತಿ ಹಿಡಿದಿತ್ತು. ಬಳಿಕ ಪುರಸಭೆಯು 1 ಕೋಟಿ ರೂ.ಮಾತ್ರ ರೈತರಿಗೆ ನೀಡಿತ್ತು. ಉಳಿದ 2 ಕೋಟಿ ರೂ.ಗಳನ್ನು ಪಾವತಿಸದ ಕಾರಣ, ಪುರಸಭೆ ಹಾಗೂ ಉಪವಿಭಾಗಾಧಿಕಾರಿ ಕಚೇರಿಯನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ನ್ಯಾಯಾಲಯದ ಸಿಬ್ಬಂದಿ ಆನಂದ್, ಮೂರ್ತಿ, ಸರಸ್ವತಿ, ರೈತ ಸಂತೋಷ್, ದೀಪು ಇದ್ದರು.