ಮಂಡ್ಯ ತಾಲೂಕು ಕಲ್ಮಂಟಿದೊಡ್ಡಿ ಗ್ರಾಮದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಆರ್.ಮನೋಹರ್ ಉದ್ಘಾಟಿಸಿದರು. 
ಮಂಡ್ಯ

ಮಹಿಳೆಯರಿಗೆ ಎಚ್‌ಪಿವಿ ಲಸಿಕೆ ಪರಿಣಾಮಕಾರಿ: ಸ್ತ್ರೀರೋಗ ತಜ್ಞ ಡಾ.ಆರ್.ಮನೋಹರ್ ಸಲಹೆ

ಪ್ರಮುಖ ಮುಖ್ಯಾಂಶಗಳು

  • ಕಲ್ಮಂಟಿದೊಡ್ಡಿಯಲ್ಲಿ ಆರೋಗ್ಯ ತಪಾಸಣೆ ಶಿಬಿರ
  • ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ಮಹಿಳಾ ಸರ್ಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಕಾರದೊಡನೆ ಆಯೋಜನೆ
ಮಂಡ್ಯ: ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್.ಪಿ.ವಿ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಆರ್.ಮನೋಹರ್ ತಿಳಿಸಿದರು.
ತಾಲೂಕಿನ ಕಲ್ಮಂಟಿದೊಡ್ಡಿ ಗ್ರಾಮದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಮಹಿಳಾ ಸರ್ಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಕಾರದೊಡನೆ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಎಚ್.ಪಿ.ವಿ ಲಸಿಕೆಯ ಬಗ್ಗೆ ಅಪಪ್ರಚಾರ ಸಲ್ಲದು. ಇದು ಪರಿಣಾಮಕಾರಿಯಾಗಿ ಇರುವಂತಹ ದಿವ್ಯೌಷಧ. ಇದರ ಸದುಪಯೋಗವನ್ನು 14 ವರ್ಷದೊಳಗಿನ ಮಹಿಳೆಯರು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಮುಟ್ಟಿನ ಕಪ್ಪಿನ ಬಳಕೆಯ ವಿಧಾನಗಳ ಬಗ್ಗೆ ಮಾತನಾಡಿದ ಅವರು, ಮಹಿಳೆಯರು ಸುರಕ್ಷಿತ ಆರೋಗ್ಯದಿಂದಿರಲು ಇದೊಂದು ಉತ್ತಮ ಸಲಕರಣೆಯಾಗಿದೆ. ಇದರ ಉಪಯೋಗ ಪಡೆದುಕೊಂಡು ಪ್ಲಾಸ್ಟಿಕ್ ಮುಕ್ತ ಸಮಾಜದತ್ತ ಗಮನ ಹರಿಸಬಹುದಾಗಿದೆ. ಮಹಿಳೆಯರಲ್ಲಿ ಆಗಿಂದಾಗ್ಗೆ ತಲೆದೋರುವ ಮುಟ್ಟಿನ ಸಮಸ್ಯೆಗಳು ಹಾಗೂ 45 ವಯಸ್ಸಿನ ನಂತರ ವಿವಿಧ ಅಂಗಾಂಗಗಳ ವೈಫಲ್ಯಗಳನ್ನು ಸೂಚಿಸುತ್ತದೆ. ಇದನ್ನು ಅರ್ಥೈಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕ. ಕ್ಯಾನ್ಸರ್ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ ಅವರು, ಕಾಲ ಕಾಲಕ್ಕೆ ಅನುಗುಣವಾಗಿ ಪರೀಕ್ಷೆ ಮತ್ತು ಚಿಕಿತ್ಸೆಯ ಮೊರೆ ಹೋದಲ್ಲಿ ಸುರಕ್ಷಿತ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಸ್ತ್ರೀರೋಗ ತಜ್ಞೆ ಡಾ.ನೀನಾದ ಅವರು ಮಹಿಳೆಯರೊಡನೆ ಸಂವಾದ ನಡೆಸಿ ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಮಕ್ಕಳ ಆರೋಗ್ಯದ ಕಾಳಜಿ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಕಾರ್ಯದರ್ಶಿ ಕೆ.ಪಿ. ಅರುಣಕುಮಾರಿ, ಎನ್‌ಎಸ್‌ಎಸ್ ಅಧಿಕಾರಿ ಪುಷ್ಪಲತಾ, ಎಸ್‌ಡಿಎಂಸಿ ಅಧ್ಯಕ್ಷ ಮಂಜೇಶ್ ಇತರರಿದ್ದರು.