ಮಂಡ್ಯ ನಗರದ ಬಂದೀಗೌಡ ಬಡಾವಣೆಯ ಗಾಯಿತ್ರಿ ಸಮುದಾಯ ಭವನದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಮಂಡ್ಯ: ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯವಾದದ್ದು ಎಂದು ಜಿಲ್ಲಾ ಬ್ರಾಹ್ಮಣ ಸಭಾಧ್ಯಕ್ಷ ಶ್ರೀಪತಿ ಭಾರದ್ವಜ್ ಹೇಳಿದರು.
ನಗರದ ಬಂದೀಗೌಡ ಬಡಾವಣೆಯ ಗಾಯಿತ್ರಿ ಸಮುದಾಯ ಭವನದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ, ಅವಿಜ್ಞಾ ಚಾರಿಟಬಲ್ ಟ್ರಸ್ಟ್ ಹಾಗೂ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬ್ರಾಹ್ಮಣ ಮಹಾಸಭಾದ ವತಿಯಿಂದ ಆರೋಗ್ಯವೇ ಭಾಗ್ಯದಡಿ ಹಲವಾರು ಆರೋಗ್ಯ ಕಾರ್ಯಕ್ರಮ ಗಳನ್ನು ಏರ್ಪಡಿಸಿಕೊಂಡು ಬಂದಿದ್ದೇವೆ. ಮನುಷ್ಯ ಪ್ರಪಂಚದಲ್ಲಿ ಏನು ಬೇಕಾದರೂ ಸಂಪಾದನೆ ಮಾಡಬಹುದು. ಆದರೆ ಆರೋಗ್ಯ ಸಂಪಾದನೆ ಮಾಡುವುದು ಬಹಳ ಕಷ್ಟ ಎಂದು ತಿಳಿಸಿದರು.
ಆರೋಗ್ಯವಿಲ್ಲದಿದ್ದರೆ ಏನು ಮಾಡಬೇಕಾದರೂ ಬಹಳ ಕಷ್ಟ. ಹಣಕಾಸು ಉಳ್ಳವರು ದೊಡ್ಡ ಆಸ್ಪತ್ರೆಗಳಲ್ಲಿ ತಪಾಸಣೆ, ಚಿಕಿತ್ಸೆ ಪಡೆಯುತ್ತಾರೆ. ಆದರೆ ಸಾಮಾನ್ಯ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಕಷ್ಟ. ಆದ್ದರಿಂದ ಇಂತಹ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಬಾಲಾಜಿ, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ರಮೇಶ್, ಉಮಾ, ಸತ್ಯ, ಅರುಣ್ ಪ್ರಸಾದ್, ಬಾಲಕೃಷ್ಣ, ಚೇತಕ್ ಇತರರಿದ್ದರು. ಇದೇ ವೇಳೆ ಶಿಬಿರದಲ್ಲಿ ಬಿಪಿ, ಶುಗರ್, ಇಸಿಜಿ, ಪಿಎಫ್‌ಟಿ, ಕಣ್ಣಿನ ತಪಾಸಣೆ ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ಸಮಸ್ಯೆಗಳ ತಪಾಸಣೆ ಮಾಡಲಾಯಿತು. ಅಗತ್ಯ ಇರುವವರಿಗೆ ನಾರಾಯಣ ಹೃದಯಾಲಯದ ನುರಿತ ವೈದ್ಯರು ಸಲಹೆ ಮತ್ತು ಸಮಾಲೋಚನೆ ನೀಡಿದರು.