ಎಸ್ ಎಸ್ ಎಸ್ ಎಲ್ ಸಿ 
ಮಂಡ್ಯ

ಪಾಂಡವಪುರ ತಾಲೂಕಿಗೆ ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನ

ಪಾಂಡವಪುರ: ತಾಲೂಕಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ತಾಲೂಕಿಗೆ ಶೇ.97.50ರಷ್ಟು ಫಲಿತಾಂಶ ಬಂದಿದ್ದು ಜಿಲ್ಲೆಗೆ 4ನೇ ಸ್ಥಾನ ಪಡೆದಿದೆ.
ತಾಲೂಕಿನಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 48 ಪ್ರೌಢಶಾಲೆಗಳಿದ್ದು, 2037 ವಿದ್ಯಾರ್ಥಿಗಳು ಈ ಸಾಲಿನಲ್ಲಿ ಪರೀಕ್ಷೆ ಬರೆದಿರುತ್ತಾರೆ. ಈ ಪೈಕಿ 1986 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 51 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಪಟ್ಟಣದ ಬಿಜಿಎಸ್ ಶಾಲೆಯ ವಿದ್ಯಾರ್ಥಿನಿ ಎಂ.ಆರ್.ಕೀರ್ತನಾ 625 ಅಂಕಗಳಿಗೆ 621 ಅಂಕ ಪಡೆಯುವ ಮೂಲಕ ಜಿಲ್ಲೆಯಲ್ಲಿ ಮೂವರೊಂದಿಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ. ತಾಲೂಕಿನ 17 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ.
23 ಶಾಲೆಗಳಿಗೆ ಶೇ.100 ಫಲಿತಾಂಶ: ತಾಲೂಕಿನಲ್ಲಿ 23 ಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ.100 ಫಲಿತಾಂಶ ದಾಖಲಿಸಿವೆ. ಈ ಪೈಕಿ ಸರ್ಕಾರಿ ಪ್ರೌಢಶಾಲೆಗಳಾದ ಬೆಳ್ಳಾಳೆ, ಮೂಡಲಕೊಪ್ಪಲು, ಚಿಟ್ನಹಳ್ಳಿ, ಅರಳಕುಪ್ಪೆ, ಹಿರೇಮರಳಿ, ಚಿನಕುರಳಿ ಸರ್ಕಾರಿ ಕೆಪಿಎಸ್ ಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿವೆ. ಸರ್ಕಾರಿ ವಸತಿ ಶಾಲೆಗಳಲ್ಲಿ ಮೂಡಲಕೊಪ್ಪಲು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಉಳಿಗೆರೆ, ಬೇಬಿ ಮುರಾರ್ಜಿ ದೇಸಾಯಿ ವಸತಿ ಶಾಲೆ, ಮಹದೇಶ್ವಪುರ ಅಂಬೇಡ್ಕರ್ ವಸತಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ.
ಅನುದಾನಿತ ರಹಿತ ಖಾಸಗಿ ಶಾಲೆಗಳಲ್ಲಿ ಬಿಜಿಎಸ್ ಪಾಂಡವಪುರ, ಬಡ್ಸ್ ಪಾಂಡವಪುರ, ಎಸ್‌ಇಟಿ ಮೇಲುಕೋಟೆ, ಜ್ಞಾನವಿಕಾಸ ಚಿನಕುರಳಿ, ಜೆಬಿಇಟಿ ಚಿನಕುರಳಿ, ಶಂಭೂಲಿಂಗೇಶ್ವರ ಶಾಲೆ ಜಯಂತಿ ನಗರ, ಸ್ಟ್ಯಾನ್ ಫೋರ್ಡ್ ಕ್ಯಾತನಹಳ್ಳಿ, ಡಿಎಂಎಸ್ ಬೇಬಿ, ವಿನಾಯಕ ಶಾಲೆ ಕೆ.ಬೆಟ್ಟಹಳ್ಳಿ, ಗುಲಾಬಿ ಶಾಲೆ ರಾಗಿಮುದ್ದನಹಳ್ಳಿ, ಕುವೆಂಪು ಶಾಲೆ ಕುಂತಿಬೆಟ್ಟ, ರೋಟರಿ ಶಾಲೆ ಪಾಂಡವಪುರ ಹಾಗೂ ಅನುದಾನಿತ ವಿಶ್ವೇಶ್ವರಯ್ಯ ಪ್ರೌಢಶಾಲೆ, ಕ್ಯಾತನಹಳ್ಳಿ ಇವು ಶೇ.100ರಷ್ಟು ಫಲಿತಾಂಶ ಪಡೆದಿವೆ ಎಂದು ಬಿಇಒ ಧರ್ಮಶೆಟ್ಟಿ ತಿಳಿಸಿದ್ದಾರೆ.